Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಹಿರಿಯ ಸಾಹಿತಿ ರಮೇಶ್ ಸರಾಫ ನಿಧನ

ಹಿರಿಯ ಸಾಹಿತಿ ರಮೇಶ್ ಸರಾಫ ನಿಧನ

0
55

ಮಕ್ಕಳ ಯಕ್ಷಗಾನದಿಂದ ಸಾಹಿತ್ಯದವರೆಗೆ ಸೇವೆ ಸಲ್ಲಿಸಿದ್ದ ರಮೇಶ್ ಸರಾಫ ಇನ್ನಿಲ್ಲ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಸಾಮಾಜಿಕ ಚಿಂತಕರಾದ ರಮೇಶ್ ಸರಾಫ (74) ಸೋಮವಾರ ಅನಾರೋಗ್ಯದಿಂದ ನಿಧನರಾದರು. ಅವರ ಅಗಲಿಕೆಯಿಂದ ಭಟ್ಕಳದ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ವಲಯಕ್ಕೆ ಅಪಾರ ನಷ್ಟ ಉಂಟಾಗಿದೆ.

ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಹಲವು ವರ್ಷಗಳಿಂದ ಸಾಹಿತ್ಯ, ಸಮಾಜಸೇವೆ ಮತ್ತು ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ರಮೇಶ್ ಸರಾಫ, ಶಿರಾಲಿ ಗ್ರಾಮದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ವ್ಯಕ್ತಿಯಾಗಿದ್ದರು.

‘ವೈರಸ ಶಿರಾಲಿ’ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ಸೇವೆ: ‘ವೈರಸ ಶಿರಾಲಿ’ (ವೈದ್ಯ ರಮೇಶ್ ಸರಾಫ್) ಎಂಬ ಕಾವ್ಯನಾಮದಲ್ಲಿ ಪ್ರಸಿದ್ಧರಾಗಿದ್ದ ಅವರು, ವಿವಿಧ ಪತ್ರಿಕೆಗಳಲ್ಲಿ ನೂರಾರು ಲೇಖನಗಳು, ಚುಟುಕುಗಳು ಹಾಗೂ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಗುರುತು ಮೂಡಿಸಿದ್ದರು. ಅವರ ಪ್ರಮುಖ ಕೃತಿಗಳಲ್ಲಿ ಗಣಿ ಧೂಳಿನಿಂದ ಮೂಡಿಬಂದ ಚುಟುಕುಗಳು, ಅಂದ ವ್ಯಕ್ತಿತ್ವಕ್ಕೆ ಚಂದ ಪಂಚಾಂಗ, ಶಾಲೆಗೆ ಮೇಷ್ಟ್ರು ಬಂದಿದ್ದಾರೆ ಮುಂತಾದ ಕೃತಿಗಳು ಸಾಹಿತ್ಯಾಸಕ್ತರ ಮೆಚ್ಚುಗೆ ಪಡೆದಿದ್ದವು.

ಸಾಹಿತ್ಯ ಸಮ್ಮೇಳನಗಳು ಹಾಗೂ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದರು.

ಭಟ್ಕಳ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದ ವ್ಯಕ್ತಿ : ಭಟ್ಕಳ ತಾಲೂಕಿನ ಪತ್ರಿಕೋದ್ಯಮ ಕ್ಷೇತ್ರಕ್ಕೂ ರಮೇಶ್ ಸರಾಫ ಅವರ ಕೊಡುಗೆ ಅಪಾರವಾಗಿದೆ. ಆಚಾರ ಮತ್ತು ಬೆಳಕಿಂಡಿ ಎಂಬ ಪತ್ರಿಕೆಗಳನ್ನು ಆರಂಭಿಸುವ ಮೂಲಕ ಸ್ಥಳೀಯ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ನೀಡಿದವರಾಗಿ ಅವರು ಗುರುತಿಸಿಕೊಂಡಿದ್ದರು. ಕೊಂಕಣಿ ಮಾತೃಭಾಷೆಯಾಗಿದ್ದರೂ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಜೀವನವನ್ನೇ ಸಮರ್ಪಿಸಿದ್ದ ಅವರು, ಭಟ್ಕಳದಲ್ಲಿ ಕನ್ನಡ ಸಾಹಿತ್ಯದ ದೀಪವನ್ನು ಬೆಳಗಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

ಮಕ್ಕಳ ಯಕ್ಷಗಾನ ಹಾಗೂ ಶಿಬಿರಗಳಲ್ಲಿ ವಿಶೇಷ ಸೇವೆ: ಮಕ್ಕಳ ಬೇಸಿಗೆ ಶಿಬಿರ, ಮಕ್ಕಳ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಯಲ್ಲಿ ಕಲೆ ಮತ್ತು ಸಾಹಿತ್ಯದ ಆಸಕ್ತಿ ಬೆಳೆಸಲು ಅವರು ಶ್ರಮಿಸಿದ್ದರು. ಅನೇಕ ಮಕ್ಕಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಜೀವ ತುಂಬಿದ ವ್ಯಕ್ತಿಯಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಪಾತ್ರ : ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಮೇಶ್ ಸರಾಫ, ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಾಹಿತ್ಯ ಪರಿಷತ್ತಿನ ಮೂಲಕ ಹಲವು ಸಾಹಿತ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

ಸಾಮಾಜಿಕ ಸೇವೆಯಲ್ಲಿಯೂ ಮುಂಚೂಣಿ : ಭಟ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸಿದ್ದರು.

ಗಣ್ಯರಿಂದ ಸಂತಾಪ : ಅವರ ನಿಧನಕ್ಕೆ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಿರಾಲಿಯ ಕಲಾಸಿರಿ ಪ್ರತಿಷ್ಠಾನ, ಗುರು ನಮನ ಬಳಗ ಸೇರಿದಂತೆ ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ರಮೇಶ್ ಸರಾಫ ಅವರ ಅಗಲಿಕೆಯಿಂದ ಭಟ್ಕಳದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ” ಎಂದು ಹಲವು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.