ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಆರ್ಥಿಕ ಅನಿಶ್ಚಿತತೆ ಎದುರಾಗಿದೆ. ಈ ಸಂದರ್ಭದಲ್ಲಿ ದೇಶದ ವಿದೇಶಿ ವಿನಿಮಯ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಾರ್ವಜನಿಕರಿಗೆ ಮಿತವ್ಯಯದ ಸಂದೇಶ ನೀಡಿದ್ದರು. ಅನಗತ್ಯ ವಿದೇಶ ಪ್ರಯಾಣ ಹಾಗೂ ವಿದೇಶಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡುವುದನ್ನು ಒಂದು ವರ್ಷ ಮುಂದೂಡುವಂತೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ, ಸರ್ಕಾರವು ವಿದೇಶ ಪ್ರಯಾಣದ ಮೇಲೆ ಹೊಸ ನಿರ್ಬಂಧ ಹಾಗೂ ತೆರಿಗೆಗಳನ್ನು ಹೇರಲಿದೆ ಎಂಬ ವರದಿಗಳು ಹರಿದಾಡತೊಡಗಿದ್ದವು. ಆದ್ರೆ ಪ್ರಧಾನಿಯವರು ಸ್ವತಃ ಈ ವರದಿಗಳನ್ನು ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ.
ಖ್ಯಾತ ಸುದ್ದಿ ಸಂಸ್ಥೆ CNBC TV-18 ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಗ್ರಾಫಿಕ್ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧದಿಂದಾಗಿ ಕಚ್ಚಾ ತೈಲ ಮತ್ತು ಆಮದು ವೆಚ್ಚಗಳು ಹೆಚ್ಚಾಗುತ್ತಿವೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಸರ್ಕಾರವು ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದು, ವಿದೇಶಿ ಪ್ರಯಾಣದ ಮೇಲೆ ಒಂದು ವರ್ಷದ ಅವಧಿಗೆ ಹೆಚ್ಚುವರಿ ಸೆಸ್, ತೆರಿಗೆ ಅಥವಾ ಸರ್‌ಚಾರ್ಜ್ ವಿಧಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ವರದಿಗೆ ಸಾಮಾಜಿಕ ಮಾಧ್ಯಮದಲ್ಲೇ ನೇರವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಇದು ಸಂಪೂರ್ಣ ಸುಳ್ಳು ಸುದ್ದಿ. ಇದರಲ್ಲಿ ಒಂದು ಚೂರೂ ಸತ್ಯಾಂಶವಿಲ್ಲ. ವಿದೇಶ ಪ್ರಯಾಣದ ಮೇಲೆ ಅಂತಹ ಯಾವುದೇ ನಿರ್ಬಂಧಗಳನ್ನು ಹೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ದೇಶದ ಜನರಿಗೆ ಸುಲಭ ವ್ಯವಹಾರ ಮತ್ತು ಸುಲಭ ಜೀವನ ಸಾಗಿಸಲು ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಬರೆದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಪ್ರಧಾನಿ ಮೋದಿ ಈ ಖಡಕ್ ಸ್ಪಷ್ಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ CNBC ಸುದ್ದಿ ಸಂಸ್ಥೆಯು ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಸರ್ಕಾರವು ವಿದೇಶ ಪ್ರಯಾಣದ ಮೇಲೆ ತೆರಿಗೆ ಅಥವಾ ಸೆಸ್ ವಿಧಿಸಲು ಪರಿಗಣಿಸುತ್ತಿದೆ ಎಂಬ ನಮ್ಮ ವರದಿ ನಿಖರವಾಗಿಲ್ಲ ಎಂದು ಒಪ್ಪಿಕೊಂಡಿರುವ ಸಂಸ್ಥೆ, ಆ ಸುಳ್ಳು ವರದಿಯನ್ನು ತನ್ನ ಜಾಲತಾಣದಿಂದ ಹಿಂತೆಗೆದುಕೊಂಡಿದೆ. ಅಷ್ಟೇ ಅಲ್ಲದೇ ಸಾರ್ವಜನಿಕರಲ್ಲಿ ಉಂಟಾದ ಗೊಂದಲಕ್ಕೆ ಅಧಿಕೃತವಾಗಿ ಕ್ಷಮೆಯಾಚಿಸಿದೆ.





















