Home Advertisement
Home ಸುದ್ದಿ ದೇಶ ಬಹುಮತವಿಲ್ಲದೆ ಪ್ರಮಾಣವಚನ ಇಲ್ಲ; ವಿಜಯ್‌ಗೆ ಮತ್ತೆ ನಿರಾಸೆ

ಬಹುಮತವಿಲ್ಲದೆ ಪ್ರಮಾಣವಚನ ಇಲ್ಲ; ವಿಜಯ್‌ಗೆ ಮತ್ತೆ ನಿರಾಸೆ

0
187

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಟಿವಿಕೆ (TVK) ಮುಖ್ಯಸ್ಥ ನಟ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಎರಡನೇ ದಿನವೂ ಅವಕಾಶ ನೀಡದೆ, 118 ಶಾಸಕರ ಬೆಂಬಲದ ಸಹಿ ಪತ್ರಗಳನ್ನು ತಂದು ಬಹುಮತ ಸಾಬೀತುಪಡಿಸಲು ಸೂಚಿಸಿದ್ದಾರೆ.

ಗುರುವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಮತ್ತೆ ಭೇಟಿ ಮಾಡಿದ ವಿಜಯ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ ಟಿವಿಕೆ ಪಕ್ಷಕ್ಕೆ ಇನ್ನೂ ಅಗತ್ಯ ಸಂಖ್ಯಾಬಲ ದೊರೆತಿಲ್ಲ ಎಂದು ಹೇಳಿದ ರಾಜ್ಯಪಾಲರು, “118 ಶಾಸಕರ ಸಹಿಗಳೊಂದಿಗೆ ಬನ್ನಿ. ಬಹುಮತ ಇರುವುದನ್ನು ಸಾಬೀತುಪಡಿಸಿದ ಬಳಿಕವೇ ಪ್ರಮಾಣವಚನ ಪ್ರಕ್ರಿಯೆ ನಡೆಯಲಿದೆ” ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ರಚನೆಯಾದ ಬಳಿಕ ಅದು ಅಸ್ಥಿರವಾಗದಂತೆ ನೋಡಿಕೊಳ್ಳಲು ಲಿಖಿತ ಬೆಂಬಲ ಅಗತ್ಯ ಎಂದು ರಾಜ್ಯಪಾಲರು ಹೇಳಿದ್ದಾರೆ. ಇದೇ ವೇಳೆ, ಬೇರೆ ಯಾವುದೇ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವುದಿಲ್ಲ ಎಂಬ ಭರವಸೆಯನ್ನೂ ವಿಜಯ್‌ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಲು ಇನ್ನೂ ಸಮಯ ಕೇಳಿಲ್ಲ ಎಂದು ಮೂಲಗಳು ಹೇಳಿವೆ. ಇದಕ್ಕೂ ಮೊದಲು ಬುಧವಾರವೂ ವಿಜಯ್ 112 ಶಾಸಕರ ಬೆಂಬಲದೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಕಾಂಗ್ರೆಸ್ ಪಕ್ಷದ ಐದು ಶಾಸಕರ ಬೆಂಬಲ ಇರುವುದಾಗಿ ಮೌಖಿಕವಾಗಿ ತಿಳಿಸಿದ್ದರೂ, ಬಹುಮತಕ್ಕೆ ಬೇಕಾದ 118 ಸಂಖ್ಯೆಗೆ ಇನ್ನೂ ಐದು ಶಾಸಕರ ಕೊರತೆ ಇದೆ.

ಈ ಹಿನ್ನೆಲೆಯಲ್ಲಿ ಮತ್ತಷ್ಟು ಶಾಸಕರ ಬೆಂಬಲ ಪಡೆಯಲು ವಿಜಯ್ ರಾಜಕೀಯ ಮಾತುಕತೆಗಳನ್ನು ಮುಂದುವರಿಸಿದ್ದಾರೆ. ಇನ್ನೊಂದೆಡೆ, ವಿಸಿಕೆ ನಾಯಕ ಥೋಲ್ ತಿರುಮಾವಲವನ್ ರಾಜ್ಯಪಾಲರು ವಿಜಯ್ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿ, ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

“ಬಿಜೆಪಿ ಹಾಗೂ ಅಮಿತ್ ಶಾ–ಮೋದಿ ತಮಿಳುನಾಡು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಟಿವಿಕೆ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ದರಿಂದ ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು,” ಎಂದು ಅವರು ಪ್ರಾದೇಶಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಮಿಳುನಾಡು ಸಿಪಿಐ ಘಟಕವೂ ರಾಜ್ಯಪಾಲರು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದು, ಪ್ರಮಾಣವಚನಕ್ಕೂ ಮುನ್ನವೇ ಬಹುಮತ ಸಾಬೀತುಪಡಿಸಲು ಹೇಳುವುದು “ಅನುಚಿತ” ಎಂದು ಟೀಕಿಸಿದೆ.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷವು ಡಿಎಂಕೆ–ಎಐಎಡಿಎಂಕೆ ಪಕ್ಷಗಳ ಮೂರು ದಶಕಗಳ ರಾಜಕೀಯ ಪ್ರಭುತ್ವಕ್ಕೆ ದೊಡ್ಡ ಸವಾಲು ಎಸೆದಿದೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದು, ಅದರ ಬಳಿಕ ಟಿವಿಕೆ ಸದಸ್ಯರ ಬಲ 107ಕ್ಕೆ ಇಳಿಯಲಿದೆ. ಕಾಂಗ್ರೆಸ್ ಬೆಂಬಲ ಸೇರಿ ಮೈತ್ರಿಯ ಒಟ್ಟು ಸಂಖ್ಯೆ 112 ಆಗಿದೆ.