ಬೆಂಗಳೂರು: ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಗೆ ಹೊಸ ಚೈತನ್ಯ ತುಂಬುವ ನಾಯಕತ್ವವಾಗಿ ರವಿ ಕೆ ಗಮನ ಸೆಳೆಯುತ್ತಿದ್ದಾರೆ. ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ 22 ನೇ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (CMD) ಅಧಿಕಾರ ವಹಿಸಿಕೊಂಡಿದ್ದಾರೆ
LCA ಮ್ಯಾನ್ ಖ್ಯಾತಿಯ ರವಿ: ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಿನ್ನೆಲೆಯೊಂದಿಗೆ 30 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ರವಿ ಕೆ, HAL ಗೆ ‘ಮಹಾರತ್ನ’ ಸ್ಥಾನ ದೊರಕಿಸಿಕೊಡುವಲ್ಲಿ ಮತ್ತು ತೇಜಸ್ (LCA Tejas) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಕ್ಷಣಾ ವಲಯದಲ್ಲಿ ಇವರನ್ನು ‘LCA ಮ್ಯಾನ್’ ಎಂದೇ ಕರೆಯಲಾಗುತ್ತದೆ. ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ತೇಜಸ್) ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದು, ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಈಗ HAL ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದಿಕ್ಕಿನಲ್ಲಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದ್ದಾರೆ.
ತೇಜಸ್ ಒಪ್ಪಂದ – ದೊಡ್ಡ ಸಾಧನೆ : ರವಿ ಕೆ ನೇತೃತ್ವದಲ್ಲಿ HAL, ₹1.1 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 180 HAL Tejas Mk1A ಯುದ್ಧವಿಮಾನಗಳ ಐತಿಹಾಸಿಕ ಒಪ್ಪಂದವನ್ನು ಪಡೆದುಕೊಂಡಿತ್ತು. ಇದು ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ತೋರಿಸಿದ ಪ್ರಮುಖ ಹೆಜ್ಜೆಯಾಗಿದೆ.
₹2 ಲಕ್ಷ ಕೋಟಿ ಆರ್ಡರ್ ಬುಕ್ : HAL ಪ್ರಸ್ತುತ ಸುಮಾರು ₹2 ಲಕ್ಷ ಕೋಟಿ ಮೌಲ್ಯದ ಆರ್ಡರ್‌ಗಳನ್ನು ಹೊಂದಿದ್ದು, ಇದು ಸಂಸ್ಥೆಯ ಬಲಿಷ್ಠ ಭವಿಷ್ಯವನ್ನು ಸೂಚಿಸುತ್ತದೆ. ಈ ಆರ್ಡರ್‌ಗಳು ದೇಶದ ರಕ್ಷಣಾ ಸ್ವಾವಲಂಬನೆಗೆ ಮಹತ್ವದ ಬಲ ನೀಡಲಿವೆ.
ಭವಿಷ್ಯದ ದೃಷ್ಟಿಕೋನ : ರವಿ ಕೆ ಮುಂದಿನ ಯೋಜನೆಗಳಲ್ಲಿ ಪ್ರಮುಖ ಅಂಶಗಳು ಕೃತಕ ಬುದ್ಧಿಮತ್ತೆ (AI) ಬಳಕೆ ಹೆಚ್ಚಿಸುವುದು, ಹೊಸ ತಂತ್ರಜ್ಞಾನಗಳಲ್ಲಿ ನಾವೀನ್ಯತೆ ಹಾಗೂ ನಾಗರಿಕ ವಿಮಾನೋದ್ಯಮ ಕ್ಷೇತ್ರಕ್ಕೆ ವಿಸ್ತರಣೆ ಮತ್ತು HAL ಅನ್ನು ಜಾಗತಿಕ ಏರೋಸ್ಪೇಸ್ ನಾಯಕನನ್ನಾಗಿ ರೂಪಿಸುವುದು ಅಲ್ಲದೆ ಆತ್ಮನಿರ್ಭರ ಮೂಲಕ ಭಾರತಕ್ಕೆ ಬಲ ತುಂಬುವುದಾಗಿದೆ.
HAL ಅಭಿವೃದ್ಧಿ ಭಾರತದ “ಆತ್ಮನಿರ್ಭರ ಭಾರತ” ದ ದೃಷ್ಟಿಗೆ ಹೊಂದಿಕೊಳ್ಳುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿ ದೇಶದ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.






















