Home Advertisement
Home ಸುದ್ದಿ ದೇಶ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಏರಿಕೆ – ವ್ಯಾಪಾರಿಗಳಿಗೆ ಶಾಕ್

ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಏರಿಕೆ – ವ್ಯಾಪಾರಿಗಳಿಗೆ ಶಾಕ್

0
111

ನವದೆಹಲಿ: ಮೇ 1ರಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ವ್ಯಾಪಾರ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ. ಸರ್ಕಾರಿ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಈ ದರ ಪರಿಷ್ಕರಣೆ ಮಾಡಿವೆ.

19 ಭಾರೀ ಏರಿಕೆ : ಒಟ್ಟು ₹993 ರೂಪಾಯಿಗಳಷ್ಟು ಏರಿಕೆಯಾಗಿರುವುದರಿಂದ, 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹3,071.50 ಹಾಗೂ ಬೆಂಗಳೂರಿನಲ್ಲಿ ₹3,154ಕ್ಕೆ ಏರಿಕೆಯಾಗಿದೆ. ಹೆಚ್ಚುವರಿಯಾಗಿ, 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್‌ಗಳ ಬೆಲೆಯನ್ನು ಇಂದಿನಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 261 ರೂ. ಹೆಚ್ಚಿಸಲಾಗಿದೆ.

ಗೃಹಬಳಕೆದಾರರಿಗೆ ತಾತ್ಕಾಲಿಕ ರಿಲೀಫ್: ಈ ಭಾರಿ ಏರಿಕೆಯ ನಡುವೆಯೂ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕೊನೆಯದಾಗಿ ಮಾರ್ಚ್ 7ರಂದು ₹60 ಏರಿಕೆ ಮಾಡಲಾಗಿತ್ತು.

ಬೆಲೆ ಏರಿಕೆಗೆ ಕಾರಣವೇನು? : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಉದ್ವಿಗ್ನತೆಗಳಿಂದ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ಪ್ರಮುಖ ಇಂಧನ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ಭಾಗದಲ್ಲಿ ಅಡಚಣೆ ಉಂಟಾದ ಪರಿಣಾಮ ತೈಲದ ಬೆಲೆಗಳು ಜಾಗತಿಕವಾಗಿ ಸುಮಾರು 50% ಏರಿಕೆ ಕಂಡಿವೆ.

ಈ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಅಂತರಾಷ್ಟ್ರೀಯ ಮಾರುಕಟ್ಟೆ ದರ ಮತ್ತು ಕರೆನ್ಸಿ ವಿನಿಮಯದ ಆಧಾರದ ಮೇಲೆ ಎಲ್‌ಪಿಜಿ ದರಗಳನ್ನು ಪರಿಷ್ಕರಿಸುತ್ತವೆ.

ವ್ಯಾಪಾರ ವಲಯಕ್ಕೆ ಹೊಡೆತ : ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ಕೈಗಾರಿಕೆಗಳು ಹೆಚ್ಚು ಹೊರೆ ಅನುಭವಿಸಲಿವೆ. ಇದರ ಪರಿಣಾಮವಾಗಿ ಹೊರಗಿನ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.

ಇಂಧನ ದರ ಸ್ಥಿರ : ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ₹102.92 ಮತ್ತು ಡೀಸೆಲ್ ₹90.99 ಪ್ರತಿ ಲೀಟರ್‌ಗೆ ಮುಂದುವರಿದಿದೆ.