ಕೇವಲ 22ನೇ ವಯಸ್ಸಿನಲ್ಲೇ ಯುವ ಚಲನಚಿತ್ರ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. 79ನೇ ಕೇನ್ಸ್ ಚಲನಚಿತ್ರೋತ್ಸವ Cannes Film Festival ಸಂದರ್ಭದಲ್ಲಿ ನಡೆಯುವ ‘ವರ್ಲ್ಡ್ ವುಮನ್ ಕೇನ್ಸ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಆಹ್ವಾನ ದೊರೆತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ.
ಜಾಗತಿಕ ವೇದಿಕೆಯಲ್ಲಿ ಪ್ರಮುಖ ಭಾಷಣ : ಮೇ 12–13, 2026ರಂದು ಕೇನ್ಸ್‌ನ ಹೋಟೆಲ್ ಸ್ಪ್ಲೆಂಡಿಡ್‌ನಲ್ಲಿ ನಡೆಯಲಿರುವ ಈ ಶೃಂಗಸಭೆಯಲ್ಲಿ ಕರೆನ್ ಸಿನಿಮಾ, ಕೃತಕ ಬುದ್ಧಿಮತ್ತೆ (AI) ಮತ್ತು ಸಾಮಾಜಿಕ ಕ್ರಿಯಾಶೀಲತೆ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮವು ಜಾಗತಿಕವಾಗಿ 10 ಲಕ್ಷಕ್ಕೂ ಹೆಚ್ಚು ವೀಕ್ಷಕರಿಗೆ ಮರುಪ್ರಸಾರವಾಗಲಿದೆ.
ಈ ವೇದಿಕೆಯಲ್ಲಿ ಅವರು ಮೋಯಿರಾ ಫೋರ್ಬ್ಸ್, ನಟಿ ಶೋಹ್ರೆ ಅಗ್ದಾಶ್ಲೂ, ನಟಿ ಟಮೆರಾ ಮೌರಿ ಹಾಗೂ ಸ್ಟೇಸಿ ಸ್ಮಿತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
‘ಸೆಪ್ಟೆಂಬರ್ 21’ – ಜಾಗತಿಕ ಪ್ರೀಮಿಯರ್ : ಕರೆನ್ ನಿರ್ದೇಶನದ ಮೊದಲ ಹಿಂದಿ-ಕನ್ನಡ ಚಿತ್ರ September 21 ಮೇ 16, 2026 ರಂದು ಸಂಜೆ 5:45ಕ್ಕೆ ಪಾಲೈಸ್ ಥಿಯೇಟರ್, ಕೇನ್ಸ್*ನಲ್ಲಿ *ಮಾರ್ಷೆ ಡು ಫಿಲ್ಮ್ ವಿಭಾಗದಲ್ಲಿ ವಿಶ್ವ ಪ್ರೀಮಿಯರ್ ಕಾಣಲಿದೆ.
ಚಿತ್ರದ ಕುರಿತಂತೆ: ಈ ಚಿತ್ರವು ಆಲ್ಜೈಮರ್ ಕಾಯಿಲೆ ಮತ್ತು ಆರೈಕೆದಾರರ ಮೌನ ಹೋರಾಟದ ಕುರಿತಾದ ಸ್ಪರ್ಶಕಥೆಯನ್ನು ಹೇಳುತ್ತದೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಝರೀನಾ ವಹಾಬ್, ಅಜಿತ್ ಶಿಧಾಯೆ ಮತ್ತು ಅಮಿತ್ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರಾಷ್ಟ್ರೀಯ–ಅಂತರರಾಷ್ಟ್ರೀಯ ಗುರುತಿನ ಪಯಣ : ಈ ಚಿತ್ರಕ್ಕೆ Alzheimer’s and Related Disorders Society of India (ARDSI) ಮಾನ್ಯತೆ ದೊರೆತಿದೆ. ಇದಕ್ಕೂ ಮುನ್ನ ಗೋವಾದ International Film Festival of India 56ನೇ ಆವೃತ್ತಿಯಲ್ಲಿ ‘ವರ್ಕ್-ಇನ್-ಪ್ರೋಗ್ರೆಸ್’ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು.
ಮೇ 22, 2026ರಂದು ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕರೆನ್ ಪ್ರತಿಕ್ರಿಯೆ : “ಕೇನ್ಸ್‌ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಪಾಲಿಗೆ ಅವಿಸ್ಮರಣೀಯ. ‘ಸೆಪ್ಟೆಂಬರ್ 21’ ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಜಾಗತಿಕ ಮಟ್ಟದಲ್ಲಿ ಸ್ಪಂದನೆ ಪಡೆಯುತ್ತವೆ ಎಂಬುದಕ್ಕೆ ಇದು ಸಾಕ್ಷಿ” ಎಂದು ಕರೆನ್ ಹೇಳಿದ್ದಾರೆ.
ನಿರ್ಮಾಣ ಮತ್ತು ತಾಂತ್ರಿಕ ತಂಡ: ವಿಸಿಕಾ ಫಿಲ್ಮ್ಸ್, FMD ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಫಿಲ್ಮ್ಸ್‌ಮ್ಯಾಕ್ಸ್ ಸಹಯೋಗದೊಂದಿಗೆ ಈ ಚಿತ್ರ ಮೂಡಿಬಂದಿದೆ. ಸಂಗೀತ ವಿನಯ್ ಚಂದ್ರಾ ಅವರದ್ದು, ಕಥೆ ಮತ್ತು ಬರಹ ರಾಜಶೇಖರ್ ಅವರದು.






















