ಮಾನವೀಯತೆ ಸತ್ತು ಹೋಗಿದೆಯೇ? ಅಥವಾ ನಿಯಮಗಳ ಹೆಸರಿನಲ್ಲಿ ನಾವು ಯಾಂತ್ರಿಕವಾಗುತ್ತಿದ್ದೇವೆಯೇ? ಒಡಿಶಾದ ಕೆಂಝರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ತನ್ನ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು, ಅಕ್ಷರ ಜ್ಞಾನವಿಲ್ಲದ ಅಣ್ಣ ತನ್ನ ತಂಗಿಯ ಅಸ್ಥಿಪಂಜರವನ್ನೇ ಹೆಗಲ ಮೇಲೆ ಹೊತ್ತು ಬ್ಯಾಂಕಿಗೆ ಬಂದ ದಾರುಣ ಪ್ರಸಂಗವಿದು.
ಕೆಂಝರ್ ಜಿಲ್ಲೆಯ ದಿಯಾನಾಲಿ ಗ್ರಾಮದ ಜಿತು ಮುಂಡಾ ಎಂಬುವವರ ತಂಗಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಆಕೆಯ ಬ್ಯಾಂಕ್ ಖಾತೆಯಲ್ಲಿ ಸುಮಾರು 19,300 ರೂಪಾಯಿ ಬಾಕಿ ಇತ್ತು. ತನ್ನ ತಂಗಿಯ ಏಕೈಕ ವಾರಸುದಾರನಾಗಿದ್ದ ಜಿತು, ಆ ಹಣವನ್ನು ಪಡೆಯಲು ಒಡಿಶಾ ಗ್ರಾಮೀಣ ಬ್ಯಾಂಕ್‌ಗೆ ಅಲೆದಾಡಿದ್ದರು. ಆದರೆ, ಬ್ಯಾಂಕ್ ವ್ಯವಸ್ಥಾಪಕರು ಮೃತ ಪತ್ರ (Death Certificate) ಅಥವಾ ಅಧಿಕೃತ ವಾರಸುದಾರರ ದಾಖಲೆ ಇಲ್ಲದೆ ಹಣ ನೀಡಲು ನಿರಾಕರಿಸಿದ್ದರು.
ಇದನ್ನು ಓದಿ: http://ಫಿಟ್‌ನೆಸ್ ಫಸ್ಟ್! ಮೈದಾನಕ್ಕಿಳಿದ ನರೇಂದ್ರ ಮೋದಿ; ಸಿಕ್ಕಿಂ ಯುವಜನತೆಗೆ ಪ್ರಧಾನಿ ನೀಡಿದ ಸಂದೇಶವೇನು?
ವಿದ್ಯೆ ಇಲ್ಲದ ಜಿತುಗೆ ಸರ್ಕಾರಿ ಕಚೇರಿಗಳ ಸಂಕೀರ್ಣ ಪ್ರಕ್ರಿಯೆ ಅರ್ಥವಾಗಲಿಲ್ಲ. ಬ್ಯಾಂಕಿನವರು “ತಂಗಿಯನ್ನು ಕರೆತನ್ನಿ ಅಥವಾ ದಾಖಲೆ ತನ್ನಿ” ಎಂದು ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಜಿತು, ಸೋಮವಾರ ಸ್ಮಶಾನಕ್ಕೆ ಹೋಗಿ ಹೂತಿದ್ದ ತಂಗಿಯ ಅವಶೇಷಗಳನ್ನು ಅಗೆದು ತೆಗೆದಿದ್ದಾರೆ. ಸುಡುವ ಬಿಸಿಲಿನಲ್ಲಿ, ಮೂರು ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ಆ ಅಸ್ಥಿಪಂಜರವನ್ನು ಹೆಗಲ ಮೇಲೆ ಹೊತ್ತು ನೇರವಾಗಿ ಬ್ಯಾಂಕ್‌ಗೆ ಆಗಮಿಸಿದರು.
ಬ್ಯಾಂಕಿನ ಒಳಗೆ ಅಸ್ಥಿಪಂಜರವನ್ನು ಹೊತ್ತು ತಂದ ಜಿತುವನ್ನು ಕಂಡು ಅಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರು ಬೆಚ್ಚಿಬಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಕೇವಲ ದಾಖಲೆಗಳಿಗಾಗಿ ಇಷ್ಟೊಂದು ಕ್ರೌರ್ಯ ತೋರುವುದೇ? ಸ್ಥಳೀಯ ಸರಪಂಚರ ಮೂಲಕ ಅಥವಾ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ತಿಳಿಯುವ ಸೌಜನ್ಯ ಬ್ಯಾಂಕಿಗೆ ಇರಲಿಲ್ಲವೇ?” ಎಂದು ಜನರು ಪ್ರಶ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಜಿತುವನ್ನು ಸಮಾಧಾನಪಡಿಸಿ, ಆ ಅವಶೇಷಗಳನ್ನು ಮತ್ತೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಿದರು. ಮಾನವೀಯತೆಯ ಆಧಾರದ ಮೇಲೆ ಈ ಪ್ರಕರಣವನ್ನು ಬಗೆಹರಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬ್ಯಾಂಕ್‌ಗಳ ನಿಯಮಗಳು ವಂಚನೆ ತಡೆಯಲು ಅಗತ್ಯವಿರಬಹುದು, ಆದರೆ ಜಿತು ಮುಂಡಾನ ಈ ಸ್ಥಿತಿ ವ್ಯವಸ್ಥೆಯ ಅಮಾನವೀಯ ಮುಖವನ್ನು ಎತ್ತಿ ತೋರಿಸಿದೆ. ಕಾಗದದ ದಾಖಲೆಗಳ ಮುಂದೆ ಬಡವನ ಕಣ್ಣೀರಿಗೆ ಬೆಲೆಯಿಲ್ಲವೇ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ.




















