Home Advertisement
Home ಸುದ್ದಿ ದೇಶ ಭಾರತ–ನ್ಯೂಜಿಲೆಂಡ್ FTA ಒಪ್ಪಂದ: 15 ವರ್ಷಗಳ ಬಳಿಕ ಐತಿಹಾಸಿಕ ಹೆಜ್ಜೆ

ಭಾರತ–ನ್ಯೂಜಿಲೆಂಡ್ FTA ಒಪ್ಪಂದ: 15 ವರ್ಷಗಳ ಬಳಿಕ ಐತಿಹಾಸಿಕ ಹೆಜ್ಜೆ

0
109

ನವದೆಹಲಿ: 15 ವರ್ಷಗಳ ಮಾತುಕತೆಗಳ ಬಳಿಕ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹು ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ (FTA)ಕ್ಕೆ ಇಂದು (ಏಪ್ರಿಲ್ 27) ದೆಹಲಿಯ ಭಾರತ್ ಮಂಟಪದಲ್ಲಿ ಅಧಿಕೃತವಾಗಿ ಸಹಿ ಹಾಕಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್‌ನ ವಾಣಿಜ್ಯ ಸಚಿವ ಟಾಡ್ ಮೆಕ್ಲೇ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು.

ರಫ್ತು-ಆಮದು ಕ್ಷೇತ್ರಕ್ಕೆ ದೊಡ್ಡ ಉತ್ತೇಜನ : ಈ ಒಪ್ಪಂದದ ಪ್ರಕಾರ, ಭಾರತದಿಂದ ನ್ಯೂಜಿಲೆಂಡ್‌ಗೆ ರಫ್ತಾಗುವ 100% ಸರಕುಗಳಿಗೆ (8,284 ಉತ್ಪನ್ನಗಳು) ಮೊದಲ ದಿನದಿಂದಲೇ ಶೂನ್ಯ ಸುಂಕ (Duty-free) ಸೌಲಭ್ಯ ಲಭ್ಯವಾಗಲಿದೆ. ಇದೇ ವೇಳೆ, ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಬರುವ ಸುಮಾರು 95% ಸರಕುಗಳ ಮೇಲಿನ ಸುಂಕವನ್ನು ಹಂತ ಹಂತವಾಗಿ ಕಡಿಮೆ ಅಥವಾ ರದ್ದುಗೊಳಿಸಲಾಗುತ್ತದೆ.

ಯಾವ ಕ್ಷೇತ್ರಗಳಿಗೆ ಹೆಚ್ಚು ಲಾಭ? : ಈ FTA ಒಪ್ಪಂದದಿಂದ ಭಾರತದಲ್ಲಿ ಪ್ರಮುಖ ಕ್ಷೇತ್ರಗಳಿಗೆ ದೊಡ್ಡ ಉತ್ತೇಜನ ಸಿಗಲಿದೆ. ಜವಳಿ (Textiles), ಚರ್ಮದ ವಸ್ತುಗಳು, ಫಾರ್ಮಾಸ್ಯುಟಿಕಲ್ಸ್, ಎಂಜಿನಿಯರಿಂಗ್ ಮತ್ತು ಆಟೋಮೊಬೈಲ್ ಉತ್ಪನ್ನಗಳು ಕಡಲ ಉತ್ಪನ್ನಗಳು ಮತ್ತು ಪ್ಲಾಸ್ಟಿಕ್ ಕ್ಷೇತ್ರ ಇವುಗಳ ರಫ್ತು ಹೆಚ್ಚಳವಾಗುವ ಸಾಧ್ಯತೆ ಇದೆ.

ನ್ಯೂಜಿಲೆಂಡ್ ಉತ್ಪನ್ನಗಳಿಗೆ ಭಾರತದಲ್ಲಿ ಪ್ರವೇಶ : ನ್ಯೂಜಿಲೆಂಡ್‌ನಿಂದ ಉಣ್ಣೆ, ಕಲ್ಲಿದ್ದಲು, ಮರ ಮತ್ತು ಕೆಲವು ಹಣ್ಣುಗಳಿಗೆ ಭಾರತದಲ್ಲಿ ಸುಲಭ ಮಾರುಕಟ್ಟೆ ಲಭ್ಯವಾಗಲಿದೆ. ಇದರಿಂದ ದ್ವಿಪಕ್ಷೀಯ ವ್ಯಾಪಾರ ಮತ್ತಷ್ಟು ಚುರುಕುಗೊಳ್ಳಲಿದೆ.

ಹೂಡಿಕೆ ಮತ್ತು ಉದ್ಯೋಗ ಅವಕಾಶ : ಮುಂದಿನ 15 ವರ್ಷಗಳಲ್ಲಿ ₹20 ಬಿಲಿಯನ್ ಡಾಲರ್ (ಸುಮಾರು ₹1.6 ಲಕ್ಷ ಕೋಟಿ) ವಿದೇಶಿ ನೇರ ಹೂಡಿಕೆ (FDI) ನಿರೀಕ್ಷೆ, ಭಾರತೀಯ ನಿಪುಣರಿಗೆ ವರ್ಷಕ್ಕೆ 5,000 ತಾತ್ಕಾಲಿಕ ಉದ್ಯೋಗ ವೀಸಾ ಅವಕಾಶ ಇದು ಯುವಕರಿಗೆ ಮತ್ತು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ತೆರೆದಿಡಲಿದೆ.

ಕೃಷಿಕರ ಹಿತ ರಕ್ಷಣೆ : ಭಾರತದ ಕೃಷಿಕರನ್ನು ರಕ್ಷಿಸುವ ಉದ್ದೇಶದಿಂದ, ಡೈರಿ ಉತ್ಪನ್ನಗಳು (ಹಾಲು, ಬೆಣ್ಣೆ, ಚೀಸ್), ಸಕ್ಕರೆ ಮತ್ತು ಖಾದ್ಯ ತೈಲಗಳಂತಹ ಸೂಕ್ಷ್ಮ ವಲಯಗಳನ್ನು ಈ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.

ವ್ಯಾಪಾರ ಗುರಿ : ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 5 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ.