ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಹರಿದಾಡುತ್ತವೆ. ಆದ್ರೆ ಕೆಲವು ದೃಶ್ಯಗಳು ಮಾತ್ರʻ ನಮ್ಮ ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಳ್ಳುತ್ತವೆ. ಅಂತಹದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ವೇದಿಕೆಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಾಲಿಗಳು ತೇವವಾಗುವಂತೆ ಮಾಡಿದೆ.
ವೈದ್ಯರ ಕೈ ಹಿಡಿದ ಪುಟ್ಟ ಕಂದಮ್ಮ: ಯಶಸ್ವಿ ಹೆರಿಗೆಮಕನಯ ನಂತರ ವೈದ್ಯರು ತಮ್ಮ ಉಪಕರಣಗಳನ್ನು ಸರಿಹೊಂದಿಸಲು ಮಗುವಿನಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ. ಆದ್ರೆ ಆ ಕ್ಷಣದಲ್ಲಿ ನಡೆದದ್ದು ಮಾತ್ರ ಪವಾಡದಂತೆ ಭಾಸವಾಗುತ್ತದೆ. ಜಗತ್ತಿಗೆ ಬಂದು ಕೆಲವೇ ಸೆಕೆಂಡುಗಳಾಗಿರುವ ಆ ಪುಟ್ಟ ನವಜಾತ ಶಿಶು, ತನ್ನ ಪುಟ್ಟ ಕೈಗಳಿಂದ ವೈದ್ಯರ ಶಸ್ತ್ರಚಿಕಿತ್ಸಾ ಕೈಗವಸನ್ನು (Surgical Glove) ಬಹಳ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ವೈದ್ಯರು ಮತ್ತು ನರ್ಸ್‌ಗಳು ಎಷ್ಟೇ ಸೌಮ್ಯವಾಗಿ ಕೈ ಬಿಡಿಸಲು ಪ್ರಯತ್ನಿಸಿದರೂ, ಆ ಮಗು ಮಾತ್ರ “ನನ್ನನ್ನು ಬಿಟ್ಟು ಈಗಲೇ ಹೋಗಬೇಡಿ” ಎಂದು ಬೇಡಿಕೊಳ್ಳುವಂತೆ ಹಠ ಹಿಡಿದು ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತಿತ್ತು.
ವಿಜ್ಞಾನದ ಪ್ರಕಾರ: ಈ ದೃಶ್ಯವು ನೋಡುಗರಿಗೆ ಭಾವನಾತ್ಮಕವಾಗಿ ಕಂಡರೂ, ವೈದ್ಯಕೀಯ ವಿಜ್ಞಾನವು ಇದಕ್ಕೆ ಆಸಕ್ತಿದಾಯಕ ವಿವರಣೆಯನ್ನು ನೀಡುತ್ತದೆ. ಇದನ್ನು ‘ಪಾಮರ್ ಗ್ರಾಸ್ಪ್ ರಿಪ್ಲೆಕ್ಸ್’ (Palmar Grasp Reflex) ಎಂದು ಕರೆಯಲಾಗುತ್ತದೆ. ಇದು ನವಜಾತ ಶಿಶುಗಳಲ್ಲಿ ಕಂಡುಬರುವ ಒಂದು ಸಹಜವಾದ ಅನೈಚ್ಚಿಕ ಪ್ರತಿಕ್ರಿಯೆಯಾಗಿದೆ. ಶಿಶುವಿನ ಅಂಗೈಗೆ ಯಾವುದೇ ವಸ್ತು ಸ್ಪರ್ಶಿಸಿದಾಗ, ಮಗು ತನ್ನ ಬೆರಳುಗಳನ್ನು ಅದರ ಸುತ್ತಲೂ ಬಿಗಿಯಾಗಿ ಮುಚ್ಚುತ್ತದೆ. ಇದು ಮಗುವಿನ ಬೆಳವಣಿಗೆಯ ಒಂದು ಅವಿಭಾಜ್ಯ ಅಂಗವಾಗಿದೆ.
ನೆಟ್ಟಿಗರ ಮೆಚ್ಚುಗೆಯ ಮಹಾಪೂರ: ಈ ವಿಡಿಯೋ ಕಂಡು ಇಂಟರ್ನೆಟ್ ಲೋಕವೇ ಮರುಳಾಗಿದೆ. “ಈ ಮಗುವಿಗೆ ತನ್ನನ್ನು ಕಾಪಾಡಿದ ನಾಯಕ ಯಾರೆಂದು ಮೊದಲೇ ತಿಳಿದಿದೆ, ಅದಕ್ಕೆ ಧನ್ಯವಾದ ಹೇಳುತ್ತಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಆ ವೈದ್ಯರನ್ನು ಮಗು ಆಯ್ಕೆ ಮಾಡಿಕೊಂಡಿದೆ. ಇದು ಜೀವಮಾನದ ಒಪ್ಪಂದ” ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ. ಆರೋಗ್ಯ ಕಾರ್ಯಕರ್ತರ ದಣಿವರಿಯದ ಸೇವೆಗೆ ಸಿಕ್ಕ ಅತ್ಯುನ್ನತ ಗೌರವ ಇದಾಗಿದೆ ಎಂದು ಅನೇಕರು ಶ್ಲಾಘಿಸಿದ್ದಾರೆ.
ಒಟ್ಟಾರೆಯಾಗಿ.. ತಂತ್ರಜ್ಞಾನ ಮತ್ತು ಯಾಂತ್ರಿಕತೆಯ ಈ ಜಗತ್ತಿನಲ್ಲಿ, ನವಜಾತ ಶಿಶುವಿನ ಈ ಪುಟ್ಟ ಸ್ಪರ್ಶವು ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧ ಮತ್ತು ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.























