ಬಾಲಿವುಡ್ ಅಂಗಳದಲ್ಲಿ ಆಗಾಗ ಕೇಳಿಬರುವ ಡ್ರಗ್ಸ್ ಜಾಲದ ಸುದ್ದಿಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತವೆ. ಇದೀಗ 2022ರಲ್ಲಿ ಇಡೀ ಚಿತ್ರರಂಗದ ನಿದ್ದೆಗೆಡಿಸಿದ್ದ ಹೈ-ಪ್ರೊಫೈಲ್ ಡ್ರಗ್ಸ್ ಪ್ರಕರಣವೊಂದರಲ್ಲಿ ಸ್ಟಾರ್ ನಟಿಯರಾದ ಶ್ರದ್ಧಾ ಕಪೂರ್ ಹಾಗೂ ನೋರಾ ಫತೇಹಿ ಸೇರಿದಂತೆ ಹಲವು ಗಣ್ಯರಿಗೆ ಬಹುದೊಡ್ಡ ರಿಲೀಫ್ ಸಿಕ್ಕಿದೆ. ಮುಂಬೈ ಪೊಲೀಸರ ತೀವ್ರ ತನಿಖೆಯ ಬಳಿಕವೂ ಈ ತಾರೆಯರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಏನಿದು 2022ರ ಡ್ರಗ್ಸ್ ಕೇಸ್?: ಮುಂಬೈ ಪೊಲೀಸರ ಡ್ರಗ್ಸ್ ವಿರೋಧಿ ದಳ (Anti-Narcotics Cell) 2022ರ ಆಗಸ್ಟ್‌ನಲ್ಲಿ ಮೊಹಮ್ಮದ್ ಸಲೀಂ ಶೇಖ್ ಎಂಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿತ್ತು. ಆತನಿಂದ 1.19 ಲಕ್ಷ ರೂ. ಮೌಲ್ಯದ ‘ಮೆಫೆಡ್ರೋನ್’ ವಶಪಡಿಸಿಕೊಳ್ಳಲಾಗಿತ್ತು. ಪೊಲೀಸ್ ವಿಚಾರಣೆ ವೇಳೆ ಆತ, “ಬಾಲಿವುಡ್ ಗಣ್ಯರು ಬರುವಂತಹ ದೊಡ್ಡ ದೊಡ್ಡ ಪಾರ್ಟಿಗಳಿಗೆ ನಾನು ಡ್ರಗ್ಸ್ ಸಪ್ಲೈ ಮಾಡುತ್ತಿದ್ದೆ” ಎಂದು ಬಾಯ್ಬಿಟ್ಟಿದ್ದ. ಆತನ ಹೇಳಿಕೆಯ ಆಧಾರದ ಮೇಲೆ ಶ್ರದ್ಧಾ ಕಪೂರ್, ನೋರಾ ಫತೇಹಿ ಮುಂತಾದವರ ಹೆಸರುಗಳು ತಳುಕುಹಾಕಿಕೊಂಡಿದ್ದವು.
ಸಾಕ್ಷಿ ಇಲ್ಲ.. ಸಿಕ್ತು ‘ಕ್ಲೀನ್ ಚಿಟ್‘: ಪೆಡ್ಲರ್ ಹೇಳಿಕೆಯನ್ನೇ ಬೆನ್ನತ್ತಿದ್ದ ಪೊಲೀಸರು, 2025ರಲ್ಲಿ ಶ್ರದ್ಧಾ ಹಾಗೂ ನೋರಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇದು ಇಡೀ ಚಿತ್ರರಂಗದಲ್ಲಿ ತಲ್ಲಣ ಮೂಡಿಸಿತ್ತು. ಆದರೆ, ಇದೀಗ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧಪಡಿಸುತ್ತಿರುವ ಪೂರಕ ದೋಷಾರೋಪ ಈ ತಾರೆಯರ ಹೆಸರುಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಅಸಲಿ ಡ್ರಗ್ಸ್ ಜಾಲಕ್ಕೂ ಹಾಗೂ ಈ ಸೆಲೆಬ್ರಿಟಿಗಳಿಗೂ ಯಾವುದೇ ನೇರ ಸಂಪರ್ಕವಿರುವ ಪುರಾವೆಗಳು ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ.
ಕೇವಲ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಮಾತ್ರವಲ್ಲದೆ, ಇಂಟರ್ನೆಟ್ ಸೆನ್ಸೇಷನ್ ಓರಿ, ಶ್ರದ್ಧಾ ಅವರ ಸಹೋದರ ಹಾಗೂ ನಟ ಸಿದ್ದಾಂತ್ ಕಪೂರ್, ಮತ್ತು ರಾಜಕಾರಣಿ ಜೀಶನ್ ಸಿದ್ದಿಕಿ ಅವರಿಗೂ ಈ ಪ್ರಕರಣದಿಂದ ‘ಕ್ಲೀನ್ ಚಿಟ್’ ಸಿಗುವ ಸಾಧ್ಯತೆಯಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ತಾರೆಯರ ಮೇಲೆ ಡ್ರಗ್ಸ್ ಆರೋಪಗಳು ಸುಲಭವಾಗಿ ಕೇಳಿಬರುತ್ತಿವೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೆಲೆಬ್ರಿಟಿಗಳು ಪಾರಾಗುತ್ತಿದ್ದಾರೆ. ಸದ್ಯ ಬಂಧಿತರಾಗಿರುವ ಮೂಲ ಆರೋಪಿಗಳ (ಪೆಡ್ಲರ್‌ಗಳ) ವಿರುದ್ಧ ಮಾತ್ರ ಮುಂಬೈ ಪೊಲೀಸರು ತನಿಖೆ ಮುಂದುವರಿಸಲಿದ್ದು, ಕಳೆದ ಮೂರು ವರ್ಷಗಳಿಂದ ಮಾನಸಿಕ ಒತ್ತಡದಲ್ಲಿದ್ದ ತಾರೆಯರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.























