ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಲ್ಗೊಂಡಿದ್ದ ಪ್ರತಿಷ್ಠಿತ ಮಾಧ್ಯಮ ಗಾಲಾ ಡಿನ್ನರ್ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ, 31 ವರ್ಷದ ಕೋಲ್ ಟೋಮಸ್ ಅಲೆನ್ ಎಂಬಾತನೇ ಈ ಕೃತ್ಯದ ಆರೋಪಿ ಎಂದು ಗುರುತಿಸಲಾಗಿದ್ದು, ಈತನನ್ನು ಸೀಕ್ರೆಟ್ ಸರ್ವಿಸ್ ಪಡೆಗಳು ಬಂಧಿಸಿವೆ.
ಕಾರ್ಯಕ್ರಮ ನಡೆಯುತ್ತಿದ್ದ ಬಾಲ್‌ರೂಮ್‌ನ ಭದ್ರತಾ ತಪಾಸಣಾ ಕೇಂದ್ರದ ಬಳಿ ಶೂಟರ್ ಇದ್ದಕ್ಕಿದ್ದಂತೆ ನುಗ್ಗಿ ಗುಂಡಿನ ಮಳೆಗರೆದಿದ್ದಾನೆ. ಈ ವೇಳೆ ಸುಮಾರು 5 ರಿಂದ 8 ಬಾರಿ ಗುಂಡು ಹಾರಿದ ಶಬ್ದ ಕೇಳಿಬಂತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯ ಮೇಲಿದ್ದ ಟ್ರಂಪ್ ಅವರನ್ನು ಭದ್ರತಾ ಪಡೆಗಳು ತಕ್ಷಣವೇ ರಕ್ಷಿಸಿ ಸ್ಥಳಾಂತರಿಸಿದವು. ಈ ಸಂದರ್ಭದಲ್ಲಿ ಅಲ್ಲಿದ್ದ ಗಣ್ಯರು, ಸಚಿವರು ಮತ್ತು ಪತ್ರಕರ್ತರು ಪ್ರಾಣಭಯದಿಂದ ಟೇಬಲ್‌ಗಳ ಅಡಿಯಲ್ಲಿ ಅಡಗಿ ಕುಳಿತುಕೊಂಡಿದ್ದರು. ಘಟನಾ ಸ್ಥಳದಲ್ಲಿ ಸೀಕ್ರೆಟ್ ಸರ್ವಿಸ್ ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದೆಯಾದರೂ, ಅವರು ಧರಿಸಿದ್ದ ಬುಲೆಟ್ ಪ್ರೂಫ್ ಜಾಕೆಟ್ ಅವರ ಪ್ರಾಣ ಉಳಿಸಿದೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಟ್ರಂಪ್, ‘ಬಂಧಿತ ಆರೋಪಿ ಒಬ್ಬ ಮಾನಸಿಕ ಅಸ್ವಸ್ಥ ವ್ಯಕ್ತಿ. ಆತನ ಬಳಿ ಮಾರಕಾಸ್ತ್ರಗಳಿದ್ದವು, ಆದರೆ ನಮ್ಮ ಧೈರ್ಯಶಾಲಿ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಆತನನ್ನು ಮಟ್ಟಹಾಕಿದ್ದಾರೆ’ ಎಂದು ತಿಳಿಸಿದ್ದಾರೆ. ಅಲ್ಲದೆ, ದಾಳಿಯ ನಂತರವೂ ಸ್ಥಿತಪ್ರಜ್ಞರಾಗಿ ಕಂಡ ಟ್ರಂಪ್, ‘ನನ್ನ ಕಾರ್ಯಕ್ರಮಗಳು ನಿಲ್ಲುವುದಿಲ್ಲ, ಮುಂದಿನ 30 ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ’ ಎಂದು ಗುಡುಗಿದ್ದಾರೆ.
ಜಿಲ್ಲಾ ಅಟಾರ್ನಿ ಜೀನಿನ್ ಪಿರೋ ಅವರು ಮಾತನಾಡಿ, ಆರೋಪಿಯ ವಿರುದ್ಧ ಫೆಡರಲ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಮಾರಕಾಸ್ತ್ರಗಳ ಅಕ್ರಮ ಬಳಕೆಯ ಅಡಿಯಲ್ಲಿ ಕಠಿಣ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತ ಶೂಟರ್ ತನ್ನ ಶರ್ಟ್ ಬಿಚ್ಚಿ ಓಡುತ್ತಿರುವ ಫೋಟೋಗಳನ್ನು ಸ್ವತಃ ಟ್ರಂಪ್ ಅವರೇ ಹಂಚಿಕೊಂಡಿದ್ದು, ಸೋಮವಾರದಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಸದ್ಯ ವಾಷಿಂಗ್ಟನ್ ಹಿಲ್ಟನ್ ಸುತ್ತಮುತ್ತ ಸೇನೆಯ ಹೆಲಿಕಾಪ್ಟರ್‌ಗಳು ಗಸ್ತು ತಿರುಗುತ್ತಿದ್ದು, ರಾಷ್ಟ್ರೀಯ ಭದ್ರತಾ ಪಡೆಯನ್ನು ನಿಯೋಜಿಸಿ ಹೈ ಅಲರ್ಟ್ ಘೋಷಿಸಲಾಗಿದೆ.




















