ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯವು ಆರ್‌ಸಿಬಿ ಪಾಲಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಈ ಪಂದ್ಯವನ್ನು ಗೆದ್ದು 10 ಅಂಕಗಳೊಂದಿಗೆ ಟೇಬಲ್‌ನಲ್ಲಿ ಭದ್ರ ಸ್ಥಾನ ಪಡೆಯುವ ಆಸೆಯಲ್ಲಿದ್ದ ಆರ್‌ಸಿಬಿಗೆ ಆರಂಭದಲ್ಲೇ ಗುಜರಾತ್ ಬ್ಯಾಟರ್‌ಗಳು ಶಾಕ್ ನೀಡಿದರು. ಅದರಲ್ಲೂ ಯುವ ಆಟಗಾರ ಸಾಯಿ ಸುದರ್ಶನ್ ಆಡಿದ ಆಟ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಸ್ತಬ್ಧಗೊಳಿಸಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ನಿರ್ಧಾರವು ಬ್ಯಾಟಿಂಗ್ ಸ್ವರ್ಗವಾದ ಚಿನ್ನಸ್ವಾಮಿಯಲ್ಲಿ ಆರಂಭದಲ್ಲಿ ಕೈಕೊಟ್ಟಂತೆ ಕಂಡಿತು. ಗುಜರಾತ್ ತಂಡದ ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಮೊದಲು ನಿಧಾನಗತಿಯ ಆಟಕ್ಕೆ ಮೊರೆಹೋದರೂ, ನಂತರ ರನ್ ಮಳೆ ಸುರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 128 ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ಐಪಿಎಲ್‌ನಲ್ಲಿ ತಮ್ಮ 8ನೇ ಶತಕದ ಜೊತೆಯಾಟವನ್ನು ದಾಖಲಿಸಿತು. ಗಿಲ್ 32 ರನ್‌ಗಳಿಗೆ ನಿರ್ಗಮಿಸಿದರೂ, ಸಾಯಿ ಸುದರ್ಶನ್ ಮಾತ್ರ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿದ ಸಾಯಿ ಸುದರ್ಶನ್, ಐಪಿಎಲ್ ಇತಿಹಾಸದಲ್ಲಿ ಒಂದು ಅಪರೂಪದ ದಾಖಲೆಯನ್ನು ಬರೆದರು. ಅವರು 72 ರನ್ ಗಳಿಸಿದ್ದಾಗ ಐಪಿಎಲ್ ವೃತ್ತಿಜೀವನದಲ್ಲಿ 2000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಈ ಸಾಧನೆಯನ್ನು ಕೇವಲ 47 ಇನ್ನಿಂಗ್ಸ್‌ಗಳಲ್ಲಿ ಮಾಡುವ ಮೂಲಕ, ಕ್ರಿಸ್ ಗೇಲ್ ಅವರಿದ್ದ (48 ಇನ್ನಿಂಗ್ಸ್) ದಾಖಲೆಯನ್ನು ಮುರಿದು ಐಪಿಎಲ್‌ನಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು. ಅಂತಿಮವಾಗಿ 100 ರನ್ ಗಳಿಸಿದ್ದಾಗ ಜೋಶ್ ಹೇಜಲ್‌ವುಡ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಸುದರ್ಶನ್ ಹೊರನಡೆದರು.
ಆದರೆ ಈ ಶತಕದೊಂದಿಗೆ ಆರ್‌ಸಿಬಿ ತಂಡವೊಂದು ಮುಜುಗರದ ದಾಖಲೆಗೆ ಸಾಕ್ಷಿಯಾಯಿತು. ಐಪಿಎಲ್ ಇತಿಹಾಸದಲ್ಲಿ ಎದುರಾಳಿ ಬ್ಯಾಟರ್‌ಗಳಿಂದ ಅತಿ ಹೆಚ್ಚು ಶತಕಗಳನ್ನು ಬಾರಿಸಿಕೊಂಡ ತಂಡ ಎಂಬ ಹಣೆಪಟ್ಟಿ ಈಗ ಆರ್‌ಸಿಬಿ ಪಾಲಾಗಿದೆ. ಇದುವರೆಗೆ ಆರ್‌ಸಿಬಿ ವಿರುದ್ಧ ಎದುರಾಳಿಗಳು 15 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ 14 ಶತಕಗಳನ್ನು ಬಿಟ್ಟುಕೊಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ದಾಖಲೆಯನ್ನು ಆರ್‌ಸಿಬಿ ಹಿಂದಿಕ್ಕಿದೆ.
ಸುದರ್ಶನ್ ಅವರ ಅಮೋಘ ಶತಕದ ನಂತರ ಗುಜರಾತ್‌ನ ರನ್ ವೇಗ ಸ್ವಲ್ಪ ತಗ್ಗಿದರೂ, ಪದಾರ್ಪಣೆ ಪಂದ್ಯವಾಡಿದ ಜೇಸನ್ ಹೋಲ್ಡರ್ ಕೇವಲ 10 ಎಸೆತಗಳಲ್ಲಿ 23 ರನ್ ಸಿಡಿಸಿ ತಂಡದ ಮೊತ್ತವನ್ನು 205ಕ್ಕೆ ತಲುಪಿಸಿದರು. 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಇನ್ನು ದ್ವಿತೀಯಾರ್ಧದಲ್ಲಿ ಆರ್‌ಸಿಬಿ ತಂಡ ಮೂರು ಗೆಲುವು ದಾಖಲಿಸಿದರೆ ಪ್ಲೇಆಫ್ ಆಡುವುದು ಖಚಿತವಾಗಲಿದೆ.























