Home Advertisement
Home ಸುದ್ದಿ ರಾಜ್ಯ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ: ಕರ್ನಾಟಕದ 6 ಗ್ರಾಮ ಪಂಚಾಯತಿಗಳಿಗೆ ಗೌರವ

ರಾಷ್ಟ್ರೀಯ ಪಂಚಾಯತ್ ಪುರಸ್ಕಾರ: ಕರ್ನಾಟಕದ 6 ಗ್ರಾಮ ಪಂಚಾಯತಿಗಳಿಗೆ ಗೌರವ

0
5

ಬೆಂಗಳೂರು: ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಪಂಚಾಯತ್ ಪುರಸ್ಕಾರಗಳಲ್ಲಿ ಕರ್ನಾಟಕದ ಗ್ರಾಮ ಪಂಚಾಯತಿಗಳು ಮಿಂಚಿದ್ದು, ಒಟ್ಟು 6 ಗ್ರಾಮ ಪಂಚಾಯತಿಗಳು ಪ್ರಶಸ್ತಿ ಪಡೆದಿವೆ. ಈ ಕುರಿತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸಂತಸ ವ್ಯಕ್ತಪಡಿಸಿ, ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಸಾಮರ್ಥ್ಯಕ್ಕೆ ಇದು ದೊಡ್ಡ ಸಾಕ್ಷಿ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, “ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ಶಕ್ತಿಶಾಲಿಯಾಗಿ ರೂಪುಗೊಳ್ಳುತ್ತಿರುವುದಕ್ಕೆ ಈ ಪುರಸ್ಕಾರಗಳು ಕನ್ನಡಿಯಾಗಿದೆ. ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿರುವುದು ಸಂತೋಷಕರ” . 2025ನೇ ಸಾಲಿನ “ದೀನ್ ದಯಾಳ್ ಉಪಾಧ್ಯಾಯ ಸತತ್ ವಿಕಾಸ್ ಪುರಸ್ಕಾರ”ಕ್ಕೆ ಕರ್ನಾಟಕದ ಮುದ್ರಾಡಿ, ವಂಡ್ಸೆ, ಹಾಲನಾಯಕನಹಳ್ಳಿ, ಮಡಾಮಕ್ಕಿ, ಸಣೂರು ಮತ್ತು ಹಕ್ಲಾಡಿ ಗ್ರಾಮ ಪಂಚಾಯತಿಗಳು ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆ ಮಿಂಚು : ಈ ಪುರಸ್ಕಾರದಲ್ಲಿ ವಿಶೇಷವಾಗಿ ಉಡುಪಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಐದು ಗ್ರಾಮ ಪಂಚಾಯತಿಗಳು ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.

ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ – ಬಡತನ ನಿರ್ಮೂಲನೆ ವಿಭಾಗ
ಕುಂದಾಪುರ ತಾಲ್ಲೂಕಿನ ವಂಡ್ಸೆ ಗ್ರಾಮ ಪಂಚಾಯತ್ – ಪ್ರಶಸ್ತಿ ವಿಭಾಗ
ಕಾರ್ಕಳ ತಾಲ್ಲೂಕಿನ ಸಣೂರು ಗ್ರಾಮ ಪಂಚಾಯತ್ – ಆರೋಗ್ಯ ವಿಭಾಗ
ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ – ಮೂಲಸೌಕರ್ಯ/ಜಲ ಸಮೃದ್ಧಿ ವಿಭಾಗ
ಕುಂದಾಪುರ ತಾಲ್ಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್ – ಸಾಮಾಜಿಕ ನ್ಯಾಯ ವಿಭಾಗ

ಇದೇ ವೇಳೆ, ಬೆಂಗಳೂರು ನಗರ ಜಿಲ್ಲೆಯ ಹಾಲನಾಯಕನಹಳ್ಳಿ ಗ್ರಾಮ ಪಂಚಾಯತ್ ಕೂಡ ವಿವಿಧ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಸಾಧನೆ ತೋರಿದ ಹಿನ್ನೆಲೆಯಲ್ಲಿ ಈ ಗೌರವಕ್ಕೆ ಪಾತ್ರವಾಗಿದೆ.

ವಿವಿಧ ವಿಭಾಗಗಳಲ್ಲಿ ಸಾಧನೆ: ಆರೋಗ್ಯಕರ ಪಂಚಾಯತ್, ಬಡತನ ನಿರ್ಮೂಲನೆ, ಸುಧಾರಿತ ಜೀವನೋಪಾಯ, ಸಾಮಾಜಿಕ ನ್ಯಾಯ ಮತ್ತು ಸುರಕ್ಷತೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕರ್ನಾಟಕದ ಗ್ರಾಮ ಪಂಚಾಯತಿಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿವೆ. ಇದು ರಾಜ್ಯದಲ್ಲಿ ಗ್ರಾಮೀಣ ಆಡಳಿತ ವ್ಯವಸ್ಥೆಯ ಬಲವನ್ನು ತೋರಿಸುತ್ತದೆ.