ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, ನಿತೀಶ್ ಕುಮಾರ್ ಅವರ ರಾಜೀನಾಮೆಯ ಬೆನ್ನಲ್ಲೇ ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ದಾರಿ ತೆರೆದಿದೆ. ಪಾಟ್ನಾದಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಮ್ರಾಟ್ ಚೌಧರಿ ಅವರು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಏಪ್ರಿಲ್ 15ರಂದು ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ನಾಯಕನೊಬ್ಬ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ.
ಬಿಜೆಪಿ ಪಾಲಿಗೆ ಐತಿಹಾಸಿಕ ಘಟ್ಟ: ಇದುವರೆಗೆ ಬಿಹಾರದಲ್ಲಿ ಬಿಜೆಪಿ ಮೈತ್ರಿ ಸರ್ಕಾರದ ಭಾಗವಾಗಿದ್ದರೂ, ಜೆಡಿಯು ನೇತೃತ್ವದಲ್ಲಿ ಸರ್ಕಾರ ಮುಂದುವರಿಯುತ್ತಿತ್ತು. ಆದರೆ ಈ ಬಾರಿ ಜೆಡಿಯು ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದು, ಬಿಜೆಪಿ ತನ್ನದೇ ನಾಯಕತ್ವದಲ್ಲಿ ಸರ್ಕಾರ ರಚಿಸುತ್ತಿದೆ.
ನಿತೀಶ್ ಬಳಿಕ ಹೊಸ ಅಧ್ಯಾಯ: ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸುಮಾರು 20 ವರ್ಷಗಳ ಕಾಲ ಬಿಹಾರವನ್ನು ಆಡಳಿತ ನಡೆಸಿದ ನಂತರ, ಇದೀಗ ಹೊಸ ನಾಯಕತ್ವಕ್ಕೆ ಅವಕಾಶ ನೀಡಲಾಗಿದೆ.
ಯಾರು ಈ ಸಾಮ್ರಾಟ್ ಚೌಧರಿ?
ಜನನ: ನವೆಂಬರ್ 16, 1968
ಸಮುದಾಯ: ಕೋರಿ (OBC) ಸಮುದಾಯದ ಪ್ರಭಾವಿ ನಾಯಕ
ತಂದೆ: ಶಕುನಿ ಚೌಧರಿ (7 ಬಾರಿ ಶಾಸಕ)
ರಾಜಕೀಯ ಆರಂಭ: 1990ರ ದಶಕದಲ್ಲಿ
ಮೊದಲ ಪಕ್ಷ: ಆರ್‌ಜೆಡಿ (RJD) ನಂತರ ಜೆಡಿಯು, ಬಳಿಕ 2017ರಲ್ಲಿ ಬಿಜೆಪಿ ಸೇರ್ಪಡೆ
ಹುದ್ದೆಗಳು: ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ, ಗೃಹ ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ನಂತರ ಮುಖ್ಯಮಂತ್ರಿಯಾಗುತ್ತಿರುವ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಮಾಣವಚನಕ್ಕೆ ಸಿದ್ಧತೆ: ಪಾಟ್ನಾದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಭಾರೀ ಸಿದ್ಧತೆಗಳು ನಡೆಯುತ್ತಿದ್ದು, ಸಾಮ್ರಾಟ್ ಚೌಧರಿಯೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.





















