ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನಾನಾ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದಲ್ಲದೆ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದವು. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷ ಬಿಜೆಪಿ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಆದರೆ ಈಗ ಬಿಜೆಪಿ ಪರಿಸ್ಥಿತಿ ‘ಹೇಳೋದು ಉಪದೇಶ ತಿನ್ನೋದು ಬದನೇಕಾಯಿ’ ಎನ್ನುವಂತಾಗಿದೆ. ಯಾಕೆ ಗೊತ್ತಾ? ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಭಾರತೀಯ ಜನತಾ ಪಾರ್ಟಿ, ಏಪ್ರಿಲ್ 23ರಂದು ನಡೆಯಲಿರುವ ಚುನಾವಣಾ ಕಣಕ್ಕೆ ತನ್ನ ಮಹತ್ವಾಕಾಂಕ್ಷೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ತಮಿಳು ಹೊಸ ವರ್ಷವಾದ ‘ಪುತ್ನಾಡು’ ಹಬ್ಬದ ಶುಭ ಸಂದರ್ಭದಲ್ಲಿ ತಮಿಳುನಾಡಿನ ರಾಜಕೀಯ ರಂಗದಲ್ಲಿ ಹೊಸ ಸಂಚಲನ ಮೂಡಿದೆ. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಪ್ರಣಾಳಿಕೆಯನ್ನು ಅನಾವರಣಗೊಳಿಸಿದ್ದು, ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹತ್ತಾರು ಜನಪರ ಯೋಜನೆಗಳನ್ನು ಘೋಷಿಸಿದ್ದಾರೆ.
ಈ ಪ್ರಣಾಳಿಕೆಯ ಪ್ರಮುಖ ಆಕರ್ಷಣೆಯೆಂದರೆ ಗೃಹಿಣಿಯರಿಗೆ ಘೋಷಿಸಲಾದ ಆರ್ಥಿಕ ನೆರವು. ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ತಿಂಗಳಿಗೆ 2,000 ರೂಪಾಯಿಗಳ ಸಹಾಯಧನ ನೀಡುವುದರ ಜೊತೆಗೆ, ಪ್ರತಿ ಮನೆಗೆ ಒಂದು ಬಾರಿಯ ಆರ್ಥಿಕ ನೆರವಿನ ರೂಪದಲ್ಲಿ 10,000 ರೂಪಾಯಿಗಳನ್ನು ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಅಷ್ಟೇ ಅಲ್ಲದೆ, ವರ್ಷದ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಪ್ರತಿ ಮನೆಗೆ ತಲಾ ಮೂರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಪಕ್ಷವು ವಾಗ್ದಾನ ಮಾಡಿದೆ. ಇನ್ನು ನಿರುದ್ಯೋಗದ ಕಾರಣದಿಂದ ಶಿಕ್ಷಣ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿರುವ ಯುವಜನತೆಗೆ ನೆರವಾಗಲು ಶಿಕ್ಷಣ ಸಾಲ ಮನ್ನಾ ಯೋಜನೆಯನ್ನು ಸಹ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜೆ.ಪಿ. ನಡ್ಡಾ ಅವರು ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಕಿಡಿ ಕಾರಿದರು. ತಮಿಳುನಾಡು ವಿಶ್ವದ ಅತ್ಯಂತ ಹಳೆಯ ಮತ್ತು ಶ್ರೇಷ್ಠ ನಾಗರಿಕತೆಗಳ ತವರೂರು, ಆದರೆ ಇಂದಿನ ಆಡಳಿತದಲ್ಲಿ ಸಾಂಸ್ಕೃತಿಕ ರಾಜಧಾನಿಯಾಗಿದ್ದ ಈ ರಾಜ್ಯವು ಅಪರಾಧಗಳ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ಸ್ಟಾಲಿನ್ ಅವರ ನೇತೃತ್ವದ ಡಿಎಂಕೆ ಪಕ್ಷವು ಕೇವಲ ಒಂದು ಕುಟುಂಬದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ ನಡ್ಡಾ ಅವರು, ಡಿಎಂಕೆ ಎಂದರೆ “Dynasty, Money, Kickbacks” (ವಂಶಪಾರಂಪರ್ಯ, ಹಣ ಮತ್ತು ಕಿಕ್‌ಬ್ಯಾಕ್) ಪಕ್ಷ ಎಂದು ವ್ಯಂಗ್ಯವಾಡಿದರು. ಸ್ಟಾಲಿನ್ ಅವರ ಮಗ, ಸಹೋದರಿ ಮತ್ತು ಅಳಿಯನ ಕೈಯಲ್ಲಿ ಅಧಿಕಾರ ಕೇಂದ್ರಿಕೃತವಾಗಿದೆ ಎಂದು ಅವರು ಪರಿವಾರ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.
ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆಗೆ ಒತ್ತು ನೀಡಿರುವ ಬಿಜೆಪಿ, ಮಧುರೈನ ತಿರುಪ್ಪರಂಕುಂಡ್ರಂ ಗುಡ್ಡದ ಮೇಲೆ ಕಾರ್ತಿಕ ದೀಪ ಬೆಳಗುವ ಪವಿತ್ರ ಸಂಪ್ರದಾಯವನ್ನು ಪುನರ್ಸ್ಥಾಪಿಸುವುದಾಗಿ ಹೇಳಿದೆ. ಅಲ್ಲದೆ, ತಮಿಳು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ತೈಪೂಸಂ ಹಬ್ಬವನ್ನು ಅಧಿಕೃತ ರಾಜ್ಯ ಹಬ್ಬವನ್ನಾಗಿ ಘೋಷಿಸಿ, ಮುರುಗನ ಪರಂಪರೆಯನ್ನು ಗೌರವಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಕೊನೆಯದಾಗಿ, ರಾಜ್ಯವನ್ನು ಕಾಡುತ್ತಿರುವ ಮಾದಕ ದ್ರವ್ಯದ ಹಾವಳಿಯನ್ನು ತಡೆಯಲು ಬಿಜೆಪಿ ಅತ್ಯಂತ ಕಠಿಣ ನಿಲುವನ್ನು ತಳೆದಿದೆ. ಇದಕ್ಕಾಗಿ ಪ್ರತ್ಯೇಕ ‘ಮಾದಕ ದ್ರವ್ಯ ನಿರ್ಮೂಲನಾ ಇಲಾಖೆ’ಯನ್ನು ರಚಿಸುವುದು, ಸಮುದ್ರದ ಮೂಲಕ ನಡೆಯುವ ಕಳ್ಳಸಾಗಣೆ ತಡೆಯಲು ವಿಶೇಷ ಗುಪ್ತಚರ ದಳವನ್ನು ನೇಮಿಸುವುದು ಮತ್ತು ಮಾದಕ ದ್ರವ್ಯ ಮಾರಾಟ ಮಾಡುವ ಜಾಲದ ಪ್ರಮುಖರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನು ಜಾರಿಗೆ ತರುವುದಾಗಿ ಬಿಜೆಪಿ ಭರವಸೆ ನೀಡಿದೆ. ಒಟ್ಟಾರೆಯಾಗಿ, ಸಾಂಸ್ಕೃತಿಕ ಹೆಮ್ಮೆ ಮತ್ತು ಆರ್ಥಿಕ ಸಬಲೀಕರಣದ ಮಂತ್ರದೊಂದಿಗೆ ಬಿಜೆಪಿ ಈ ಬಾರಿ ಚುನಾವಣಾ ಕಣಕ್ಕಿಳಿದಿದೆ.





















