Home Advertisement
Home ಸುದ್ದಿ ದೇಶ 4 ಮರಿಗಳಿಗೆ ಜನ್ಮ ನೀಡಿದ ಭಾರತೀಯ ಮೂಲದ ಚಿರತೆ ಗಾಮಿನಿ

4 ಮರಿಗಳಿಗೆ ಜನ್ಮ ನೀಡಿದ ಭಾರತೀಯ ಮೂಲದ ಚಿರತೆ ಗಾಮಿನಿ

0
34

ಮಧ್ಯಪ್ರದೇಶ: ಭಾರತದ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತೀಯ ಪರಿಸರಕ್ಕೆ ಹೊಂದಿಕೊಂಡ ಹೆಣ್ಣು ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ‘ಪ್ರಾಜೆಕ್ಟ್ ಚೀತಾ’ ಯೋಜನೆಗೆ ಐತಿಹಾಸಿಕ ಸಾಧನೆಯಾಗಿ ಪರಿಗಣಿಸಲಾಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಈ ಬೆಳವಣಿಗೆಯನ್ನು ಶ್ಲಾಘಿಸಿ, ಇದು ಭಾರತದಲ್ಲಿ ಚಿರತೆಗಳ ಪುನರ್ವಸತಿ ಪ್ರಯತ್ನಗಳ ಯಶಸ್ಸಿನ ಸೂಚಕ ಎಂದು ಹೇಳಿದ್ದಾರೆ. ಸುಮಾರು 25 ತಿಂಗಳ ವಯಸ್ಸಿನ ಗಾಮಿನಿ-ಕೆಜಿಪಿ 12 ಹೆಸರಿನ ಹೆಣ್ಣು ಚಿರತೆ ನೈಸರ್ಗಿಕ ಪರಿಸ್ಥಿತಿಯಲ್ಲೇ ಈ ಮರಿಗಳಿಗೆ ಜನ್ಮ ನೀಡಿದೆ.

2022ರಲ್ಲಿ ಪ್ರಾರಂಭವಾದ ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಬಳಿಕ, ಕಾಡಿನಲ್ಲೇ ಚಿರತೆ ಮರಿಗಳ ಜನನ ದಾಖಲಾಗಿರುವುದು ಇದೇ ಮೊದಲ ಬಾರಿಗೆ. ಇದು ಚಿರತೆಗಳು ಭಾರತೀಯ ವಾತಾವರಣಕ್ಕೆ ಯಶಸ್ವಿಯಾಗಿ ಹೊಂದಿಕೊಳ್ಳುತ್ತಿರುವುದನ್ನು ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವನ್ಯಜೀವಿ ಸಂರಕ್ಷಣಾ ತಜ್ಞರು, ಪಶುವೈದ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ನಡೆಸುತ್ತಿರುವ ವೈಜ್ಞಾನಿಕ ನಿರ್ವಹಣೆ ಮತ್ತು ಕಾಳಜಿಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಬೆಳವಣಿಗೆ ಭಾರತದಲ್ಲಿ ಚಿರತೆಗಳ ಭವಿಷ್ಯಕ್ಕೆ ಭರವಸೆ ಮೂಡಿಸುವಂತಿದ್ದು, ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.