Home Advertisement
Home ಕ್ರೀಡೆ ಕಿಂಗ್ ಕೊಹ್ಲಿ ಕೊಟ್ಟ ಮ್ಯಾಜಿಕ್ ಸಂದೇಶ; ವೈಭವ್ ಕ್ಯಾಪ್ ಮೇಲೆ ವಿರಾಟ್ ಬರೆದಿದ್ದೇನು?

ಕಿಂಗ್ ಕೊಹ್ಲಿ ಕೊಟ್ಟ ಮ್ಯಾಜಿಕ್ ಸಂದೇಶ; ವೈಭವ್ ಕ್ಯಾಪ್ ಮೇಲೆ ವಿರಾಟ್ ಬರೆದಿದ್ದೇನು?

0
33

“ಚೈನ್ ಕುಲಿ ಕಿ ಮೈನ್ ಕುಲಿ” ಸಿನಿಮಾದಲ್ಲಿ ಆ ಪುಟ್ಟ ಹುಡುಗ ಮ್ಯಾಜಿಕ್ ಬ್ಯಾಟ್ ಹಿಡಿದು ಬಂದು ಅಂತರಾಷ್ಟ್ರೀಯ ಬೌಲರ್‌ಗಳನ್ನು ಬೆಚ್ಚಿಬೀಳಿಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇಂದು, 2026ರ ಐಪಿಎಲ್ ಅಂಗಳದಲ್ಲಿ ಅಂತಹದ್ದೇ ಒಂದು ಅದ್ಭುತ ಕಣ್ಣಮುಂದೆ ಘಟಿಸುತ್ತಿದೆ. ಆ ಅದ್ಭುತದ ಹೆಸರು ವೈಭವ್ ಸೂರ್ಯವಂಶಿ. ರಾಜಸ್ಥಾನ್ ರಾಯಲ್ಸ್ ತಂಡದ ಈ 15 ವರ್ಷದ ಹದಿಹರೆಯದ ಓಪನರ್‌ನ ಬೆಳವಣಿಗೆ ಕೇವಲ ಆಶ್ಚರ್ಯವಲ್ಲ, ಇದು ನಂಬಲಸಾಧ್ಯವಾದ ಒಂದು ಕಾಲ್ಪನಿಕ ಕಥೆಯಂತೆ ಭಾಸವಾಗುತ್ತಿದೆ.

ಬೌಲಿಂಗ್ ಲೋಕದ ದಿಗ್ಗಜರಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಪವರ್‌ಪ್ಲೇನಲ್ಲಿ ದಾಳಿಗಿಳಿದಾಗ, ಎದುರಾಳಿ ಬ್ಯಾಟರ್ ಎಚ್ಚರಿಕೆಯಿಂದ ಆಡುತ್ತಾನೆ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಈ ಹದಿನೈದರ ಹರೆಯದ ಹುಡುಗನ ಲೆಕ್ಕಾಚಾರವೇ ಬೇರೆಯಾಗಿತ್ತು. ಅನುಭವಿ ಬೌಲರ್‌ಗಳ ಲಯ ತಪ್ಪಿಸಿ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ವೈಭವ್ ಆರ್ಭಟಕ್ಕೆ ದಿಗ್ಗಜರೇ ಮಂಕಾದರು. ಅಂದು ಸಿನಿಮಾದಲ್ಲಿ ಬಾಲಕನಿಗೆ ಮ್ಯಾಜಿಕ್ ಬ್ಯಾಟ್ ಸಿಕ್ಕಂತೆ, ಇಂದು ವೈಭವ್‌ಗೆ ಸಾಕ್ಷಾತ್ ವಿರಾಟ್ ಕೊಹ್ಲಿಯವರಿಂದಲೇ ಒಂದು ಅಮೂಲ್ಯವಾದ ಸಮ್ಮತಿ ಸಿಕ್ಕಿದೆ.

ಆರ್‌ಸಿಬಿ ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ರಾಜಸ್ಥಾನ್ ಮೇಲೆ ಒತ್ತಡವಿತ್ತು. ಆದರೆ ವೈಭವ್ ನೀಡಿದ ಸ್ಫೋಟಕ ಆರಂಭ ಆರ್‌ಸಿಬಿಯ ಎಲ್ಲಾ ಕನಸುಗಳನ್ನು ನುಚ್ಚುನೂರು ಮಾಡಿತು. ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ 12 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಅಮೋಘ ಜಯದೊಂದಿಗೆ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೆ, ವೈಭವ್ ಸೂರ್ಯವಂಶಿ ಯಶಸ್ವಿ ಜೈಸ್ವಾಲ್‌ರನ್ನೇ ಹಿಂದಿಕ್ಕಿ ‘ಆರೆಂಜ್ ಕ್ಯಾಪ್’ ಮುಡಿಗೇರಿಸಿಕೊಂಡಿದ್ದಾರೆ. ಕೇವಲ ನಾಲ್ಕು ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ 200 ರನ್ ಗಳಿಸಿರುವ ಈತನ ಆಟ ಅಕ್ಷರಶಃ ಅದ್ವಿತೀಯ.

ಪಂದ್ಯದ ನಂತರದ ಕ್ಷಣವಂತೂ ಮರೆಯಲಾಗದಂತದ್ದು. ತನ್ನ ಆರಾಧ್ಯ ದೈವ ವಿರಾಟ್ ಕೊಹ್ಲಿ ಬಳಿ ಆಟೋಗ್ರಾಫ್ ಕೇಳಲು ಹೋದ ವೈಭವ್‌ಗೆ ಕೊಹ್ಲಿ ಕೇವಲ ಸಹಿ ನೀಡಲಿಲ್ಲ. ಬದಲಾಗಿ ರಾಜಸ್ಥಾನ್ ರಾಯಲ್ಸ್ ಕ್ಯಾಪ್ ಮೇಲೆ “ಡಿಯರ್ ವೈಭವ್, ವೆಲ್ ಡನ್” ಎಂದು ಬರೆದು ಆತನ ಪ್ರತಿಭೆಗೆ ದೊಡ್ಡ ಮೊಹರು ಒತ್ತಿದರು. ಕಿಂಗ್ ಕೊಹ್ಲಿಯ ಆ ಒಂದು ಸಣ್ಣ ಸಂದೇಶ, ಈ ಯುವ ಪ್ರತಿಭೆಯ ಭವಿಷ್ಯದ ಹಾದಿಗೆ ಅತಿದೊಡ್ಡ ಪ್ರೇರಣೆಯಾಗಿದೆ. ಭಾರತೀಯ ಕ್ರಿಕೆಟ್‌ನ ಹೊಸ ಯುಗ ಆರಂಭವಾಗಿದೆ ಎಂಬದಕ್ಕೆ ವೈಭವ್ ಸೂರ್ಯವಂಶಿ ಅವರ ಈ ಆಟವೇ ಸಾಕ್ಷಿ.