Home Advertisement
Home ಸುದ್ದಿ ರಾಜ್ಯ ಎಲ್‌ಪಿಜಿ ಕೊರತೆ: ಕೇಂದ್ರದ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ!ಆಟೋ ಚಾಲಕರ ಸಂಕಷ್ಟಕ್ಕೆ ಯಾರು ಕಾರಣ?

ಎಲ್‌ಪಿಜಿ ಕೊರತೆ: ಕೇಂದ್ರದ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ!ಆಟೋ ಚಾಲಕರ ಸಂಕಷ್ಟಕ್ಕೆ ಯಾರು ಕಾರಣ?

0
35

ಎಲ್‌ಪಿ ಜಿ ಕೊರತೆಯಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರ ಸಮಸ್ಯೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಈ ಸಮಸ್ಯೆಯನ್ನು ಬಗೆಹರಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದ್ದಾರೆ. ಆಟೋ ಚಾಲಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅನಿಲ ಪೂರೈಕೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ, ಇದು ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದರು. ಕೇಂದ್ರ ಸರ್ಕಾರ ಮುಂಜಾಗ್ರತೆ ಕ್ರಮಗಳು ಹಾಗೂ ಸಮರ್ಪಕ ನೀತಿ ರೂಪಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ಬಿಜೆಪಿ ಇದುವರೆಗೆ ಈ ವಿಚಾರದಲ್ಲಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ಜನರಿಗೆ ಉಂಟಾದ ತೊಂದರೆಗಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಗ್ಯಾಸ್ ಅಭಾವ ಹೆಚ್ಚುತ್ತಿರುವ ಬಗ್ಗೆ ಅವರು ಚಿಂತೆ ವ್ಯಕ್ತಪಡಿಸಿ, ಇದರಿಂದ ಆಟೋ ಚಾಲಕರು ಮಾತ್ರವಲ್ಲದೆ ಸಂಚಾರ ವ್ಯವಸ್ಥೆ ಮತ್ತು ಹೊಟೇಲ್ ಕ್ಷೇತ್ರವೂ ಸಂಕಷ್ಟ ಅನುಭವಿಸುತ್ತಿವೆ ಎಂದು ಹೇಳಿದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉಪಚುನಾವಣೆಗಳ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದೆ ಎಂದು ಹೇಳಿದರು. ಕಳೆದ ಚುನಾವಣೆಗೆ ಹೋಲಿಸಿದರೆ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೀಳಲಿವೆ ಎಂದರು.

ಪ್ರಚಾರ ಕಾರ್ಯಗಳ ಕುರಿತು ಮಾತನಾಡಿದ ಅವರು, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಪ್ರಚಾರ ನಡೆಸಿ ಬಂದಿದ್ದು, ಕಾರ್ಯಕರ್ತರು ಮನೆಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು. ಕಳೆದ ಬಾರಿ ಬಿಜೆಪಿಗೆ ಮತ ಹಾಕಿದ್ದವರೂ ಈ ಬಾರಿ ಕಾಂಗ್ರೆಸ್ ಪರ ಮತ ನೀಡುವುದಾಗಿ ತಿಳಿಸಿದ್ದಾರೆ ಎಂದರು. ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಅವರಿಗೆ ಸಹಾಯಕವಾಗಿವೆ ಎಂದು ಜನರು ಗುರುತಿಸುತ್ತಿದ್ದಾರೆ. ಈ ಯೋಜನೆಗಳನ್ನು ಮುಂದುವರಿಸಲು ಜನರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಕೇರಳ ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ ಅವರು, ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಪ್ರಚಾರ ಮುಗಿಸಿದ ನಂತರ ದಾವಣಗೆರೆ ಅಥವಾ ಬಾಗಲಕೋಟೆಗೆ ಮರಳುವ ಯೋಜನೆ ಇದೆ ಎಂದರು.

ಸಿಎಂ ದಾವಣಗೆರೆಯಲ್ಲಿ ಪ್ರಚಾರ ಮಾಡಲು ಸೂಚಿಸಿದ್ದು ಹಾಗೂ ವೇಣುಗೋಪಾಲ್ ಅವರು ಕೇರಳದಲ್ಲಿ ಪ್ರಚಾರ ಮಾಡಲು ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಯಾರು ಇದ್ದರೂ ಇಲ್ಲದಿದ್ದರೂ ತಮ್ಮ ಕರ್ತವ್ಯವನ್ನು ನಿಭಾಯಿಸುವುದಾಗಿ ಹೇಳಿದರು.