Home Advertisement
Home ನಮ್ಮ ಜಿಲ್ಲೆ ಬೆಂಗಳೂರು SC ಒಳಮೀಸಲು: 5.3-5.3-4.4 ಸೂತ್ರ? ಕೊನೆಗೂ ವಿವಾದ ಬಗೆಹರಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್ ಪ್ಲ್ಯಾನ್

SC ಒಳಮೀಸಲು: 5.3-5.3-4.4 ಸೂತ್ರ? ಕೊನೆಗೂ ವಿವಾದ ಬಗೆಹರಿಸಲು ರಾಜ್ಯ ಸರ್ಕಾರದಿಂದ ಮಾಸ್ಟರ್ ಪ್ಲ್ಯಾನ್

0
38

ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನುಸಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಹಂಚಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಗಂಭೀರವಾದ ಚಿಂತನೆ ನಡೆಸಿದೆ. ಈ ಹಿನ್ನೆಲೆ, ಮಾರ್ಚ್ 27ರಂದು ಮಧ್ಯಾಹ್ನ 12 ಗಂಟೆಗೆ ಸಚಿವ ಸಂಪುಟದ ವಿಶೇಷ ಸಭೆ ನಡೆಯಲಿದೆ. ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಒಟ್ಟು ಶೇ.50ರ ಮೀಸಲು ಮಿತಿಯೊಳಗೆ ಒಳಮೀಸಲು ಹಂಚಿಕೆ ಮಾಡುವ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ. ಪ್ರಸ್ತಾಪಿತ ಹಂಚಿಕೆ ಹೀಗಿದೆ ನೋಡಿ:

ಪರಿಶಿಷ್ಟ ಜಾತಿಯ ಬಲಗೈ ಸಮುದಾಯಗಳಿಗೆ – ಶೇ.5.3
ಎಡಗೈ ಸಮುದಾಯಗಳಿಗೆ – ಶೇ.5.3
ಕೊರಚ, ಲಂಬಾಣಿ, ಬೋವಿ ಸೇರಿದಂತೆ ಸ್ಪೃಶ್ಯ ಸಮುದಾಯಗಳು ಹಾಗೂ ಅಲೆಮಾರಿ ಬುಡಕಟ್ಟು ಪರಿಶಿಷ್ಟ ಜಾತಿಗಳಿಗೆ – ಒಟ್ಟು ಶೇ.4.4

ಈ ಪ್ರಸ್ತಾವನೆಗೆ ಸಚಿವ ಸಂಪುಟವು ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಹೆಚ್ಚಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಕೆಲವು ಸಮುದಾಯಗಳಿಗೆ ಸಮರ್ಪಕ ಪ್ರಾತಿನಿಧ್ಯ ಸಿಗದಿರುವುದನ್ನು ಗಮನದಲ್ಲಿಟ್ಟುಕೊಂಡು ಮರುವರ್ಗೀಕರಣ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಸಂಬಂಧ ಎಚ್. ಎನ್. ನಾಗಮೋಹನ್ ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.

ಆಯೋಗದ ವರದಿ ಕುರಿತು ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಚರ್ಚಿಸಿ, ವರದಿಯಲ್ಲಿ ಕೆಲ ಗೊಂದಲಗಳನ್ನು ಪರಿಹರಿಸಲು ನಿರ್ಧರಿಸಿತ್ತು. ಸಂಪುಟವು ತನ್ನದೇ ವಿವೇಚನೆಯಿಂದ 101 ಪರಿಶಿಷ್ಟ ಜಾತಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ವರದಿ ಆಧಾರವಾಗಿ ಸಚಿವ ಸಂಪುಟವು ಪರಿಶಿಷ್ಟ ಜಾತಿಗಳನ್ನು ಎ, ಬಿ, ಸಿ ಎಂಬ ಮೂರು ಗುಂಪುಗಳಾಗಿ ವಿಭಾಗಿಸಿ, ಪ್ರತಿ ಗುಂಪಿಗೆ ಪ್ರತ್ಯೇಕ ಮೀಸಲಾತಿ ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿತ್ತು. ಜೊತೆಗೆ, ಈ ಗುಂಪುಗಳಿಗೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸುವ ಪ್ರಕ್ರಿಯೆಯೂ ಕೈಗೊಳ್ಳಲಾಗಿದೆ.

ಈ ಹಿನ್ನಲೆಯಲ್ಲಿ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ 5.3:5.3:4.4ರ ಫಾರ್ಮುಲಾ ಜಾರಿಗೆ ತೀರ್ಮಾನಿಸಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಕಡೆ, ಒಳಮೀಸಲು ಜಾರಿಗೆ ಬರದೇ ಇರುವ ಪರಿಸ್ಥಿತಿಯಲ್ಲಿ 56,432 ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಸರ್ಕಾರ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ವಿವಿಧ ಮಾದಿಗ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಈಗಾಗಲೇ ರಾಜ್ಯದ ತುಮಕೂರು, ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ದೇವನಹಳ್ಳಿ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಜೋರಾಗಿದ್ದವು. ಬೆಂಗಳೂರು ನಗರದಲ್ಲಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂದೆ ರ್ಯಾಲಿ ನಡೆಸಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಸಮಾವೇಶ ನಡೆಸಿ, ನಂತರ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಾಯಿತು. ಸಚಿವ ಸಂಪುಟದ ಸಭೆಯ ನಂತರ ಒಳಮೀಸಲು ಕುರಿತು ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಈ ನಿರ್ಧಾರ ರಾಜ್ಯದ ಸಾಮಾಜಿಕ ಸಮತೋಲನ ಮತ್ತು ರಾಜಕೀಯ ಸಮೀಕರಣಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.