Home Advertisement
Home ನಮ್ಮ ಜಿಲ್ಲೆ ಹಾವೇರಿ ಹೋರಿ ಬೆದರಿಸುವ ಸ್ಪರ್ಧೆಗೆ ಕಡಿವಾಣ, ಶ್ರೀಗಳ ಅಭಿಯಾನ: ಮಾರಾಟವಾಗದ ಮದ್ಯ

ಹೋರಿ ಬೆದರಿಸುವ ಸ್ಪರ್ಧೆಗೆ ಕಡಿವಾಣ, ಶ್ರೀಗಳ ಅಭಿಯಾನ: ಮಾರಾಟವಾಗದ ಮದ್ಯ

0
60

ಹಾವೇರಿ: ಈ ಬಾರಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಗೆ ಕಡಿವಾಣ ಹಾಗೂ ಹುಕ್ಕೇರಿಮಠದ ಶ್ರೀಗಳು ದುಶ್ಚಟಗಳನ್ನು ಬಿಡಿ ಎಂಬ ಅಭಿಯಾನ ನಡೆಸಿದ ಪರಿಣಾಮ ಲಕ್ಷಾಂತರ ರೂ., ಮೌಲ್ಯದ ಮದ್ಯ ಮಾರಾಟವಾಗದೇ ಅವಧಿ ಮೀರಿದೆ.

ದೀಪಾವಳಿ ಹಬ್ಬದ ದಿನವೇ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದ್ದರಿಂದ ನಾಲ್ವರು ಮೃತಪಟ್ಟಿದ್ದರು. ಪರಿಣಾಮ ಹೋರಿ ಹಬ್ಬಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಪ್ರತಿ ವರ್ಷ ನಡೆದಂತೆ ಹೋರಿ ಹಬ್ಬ ನಡೆದಿದ್ದರೆ ಲಕ್ಷಾಂತರ ಜನ ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದರು. ಆಗ ನೀರು ಮಾರಾಟದಂತೆ ಮದ್ಯ ಮಾರಾಟ ನಡೆಯಿತ್ತು. ಹೀಗಾಗಿ ಹೋರಿ ಹಬ್ಬ ನಡೆಯದ ಪರಿಣಾಮ ಮದ್ಯ ಮಾರಾಟಕ್ಕೆ ಹೊಡೆದ ಬಿದ್ದಿದೆ.

ಅಲ್ಲದೇ ಡಿಸೆಂಬರ್ ತಿಂಗಳಲ್ಲಿ ನಡೆದ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಹತ್ತಾರು ಶ್ರೀಗಳು ಹಾವೇರಿ ಶಹರ ಸೇರಿ ನೂರಾರು ಹಳ್ಳಿಹಳ್ಳಿ ಪಾದಯಾತ್ರೆ ನಡೆಸಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎಂಬ ಅಭಿಯಾನ ನಡೆಸಿದ್ದರು. ಇದರ ಪರಿಣಾಮ ಸಾಕಷ್ಟು ಯುವಕರು ಮದ್ಯ ತ್ಯಜಿಸಿದ್ದರು. ಹೀಗಾಗಿ ಜಿಲ್ಲೆಯ ಮದ್ಯ ಮಾರಾಟದ ಇತಿಹಾಸದಲ್ಲೇ ದೊಡ್ಡ ಹೊಡೆದ ಬಿದ್ದಿದೆ.

ಸಕಾಲಕ್ಕೆ ಮಾರಾಟವಾಗದೇ ಅವಧಿ ಮೀರಿದ ಸುಮಾರು 76 ಲಕ್ಷ ರೂ., ಮೌಲ್ಯದ ಮದ್ಯವನ್ನು ಮಂಗಳವಾರ ಅಬಕಾರಿ ಇಲಾಖೆ ನಾಶಪಡಿಸಿದೆ. ಹಾವೇರಿ ಹೊರ ವಲಯದಲ್ಲಿರುವ ರಾಜ್ಯ ಪಾನೀಯ ನಿಗಮದ ಗೋದಾಮಿನ ಆವರಣದಲ್ಲಿ 2,803 ಬಿಯರ್ ಬಾಕ್ಸ್‌ಗಳಲ್ಲಿದ್ದ 45,466 ಮದ್ಯದ ಬಾಟಲ್‌ಗಳನ್ನು ಧ್ವಂಸಗೊಳಿಸಲಾಯಿತು.

ಈ ವೇಳೆ ಅಬಕಾರಿ ಡಿಸಿ ವನಜಾಕ್ಷಿ ಎಂ., ತಹಶೀಲ್ದಾರ್ ಶರಣಮ್ಮ ಕಾರಿ, ಅಬಕಾರಿ ಡಿಎಸ್ಪಿ ಹೊನ್ನಪ್ಪ ಓಲೇಕಾರ, ಕೆಎಸ್‌ಬಿಸಿಎಲ್ ಮ್ಯಾನೇಜರ್ ಸಿ.ಡಿ. ನಾಡಗೇರ ಇತರರಿದ್ದರು.