ಬೀದರ್: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್)ಯಲ್ಲಿ ಮಂಗಳವಾರ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾದ ಅನಿಷ್ಕಾರ್ ಚವ್ಹಾಣ್ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಅಂತಿಮ ವರ್ಷದ ಮೆಡಿಕಲ್ ಓದುತ್ತಿದ್ದ ಅನಿಷ್ಕಾರ್ ಬ್ರಿಮ್ಸ್ ವಸತಿ ನಿಲಯದ ತನ್ನ ಕೋಣೆಯಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಲವು ತಿಂಗಳಿನಿಂದ ಈತ ಆನ್‌ಲೈನ್ ಆಟವಾಡುವ ಗೀಳು ಅಂಟಿಸಿಕೊಂಡಿದ್ದ. ಆಟದಲ್ಲಿ ಒಂದಿಷ್ಟು ಹಣ ಕಳೆದುಕೊಂಡಿದ್ದಾನೆ. ಸ್ನೇಹಿತರು ಹಾಗೂ ಪರಿಚಿತರ ಬಳಿ ಸಾಲವೂ ಪಡೆದಿದ್ದ. ನಿನ್ನೆಯೇ ಪರಿಚಿತರ ಬಳಿ 80 ಸಾವಿರ ರೂ. ಪಡೆದಿದ್ದು, ಈ ಹಣ ಆಟದಲ್ಲಿ ಕಳೆದುಕೊಂಡಿದ್ದ ಎನ್ನಲಾಗಿದೆ. ಆಟದ ಗೀಳು ಹಾಗೂ ಹಣ ಕಳೆದುಕೊಂಡ ಖಿನ್ನತೆಯಲ್ಲಿ ಆತ್ಮಹತ್ಯೆಗೆ ಕೈ ಹಾಕಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಬೆಳಿಗ್ಗೆ ಅನಿಷ್ಕಾರ್ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಂತೆ ಸಹಪಾಠಿಗಳು ಸ್ಥಳಕ್ಕಾಗಮಿಸಿ ಕಣ್ಣೀರಿಟ್ಟರು. ಕಾಲೇಜಿನಲ್ಲಿ ಚೆನ್ನಾಗಿ ಓದುತ್ತಿದ್ದ. ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಆತ್ಮಹತ್ಯೆಗೆ ಕೈ ಹಾಕಿರುವುದು ದುರದೃಷ್ಟಕರ ಎಂದು ಮಮ್ಮಲ ಮರಗಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅನಿಷ್ಕಾರ್ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಎಸ್ಪಿ ಪ್ರದೀಪ್ ಗುಂಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಮಗ್ರ ತನಿಖೆ ಬಳಿಕ ಆತ್ಮಹತ್ಯೆಯ ನಿಖರ ಕಾರಣ ಗೊತ್ತಾಗಲಿದೆ.






















