ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ಆದ್ರೆ ಸಾಕು ಐಷಾರಾಮಿ ಕಾರುಗಳ ದರ್ಬಾರ್ ಹೆಚ್ಚಾಗುತ್ತಿದೆ. ಜನನಿಬಿಡ ಪ್ರದೇಶದಲ್ಲೇ ಐಷಾರಾಮಿ ಕಾರುಗಳ ಡ್ರಿಫ್ಟಿಂಗ್ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ನಗರದ ಮಧ್ಯಭಾಗದಲ್ಲಿ ಐಷಾರಾಮಿ ಲ್ಯಾಬೋರ್ಗಿನಿ ಕಾರು ಕಾರಿನಿಂದ ಡ್ರಿಫ್ಟಿಂಗ್ ನಡೆಸಿರುವ ಕೇಸ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಡೆದ ಈ ಘಟನೆಗೆ ಸಂಬಂಧಿಸಿ ಮಾಜಿ ಭೂಗತ ದೊರೆ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹೆಸರು ಕೇಳಿ ಬಂದಿದೆ. ರಿಕ್ಕಿ ರೈಗೆ ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸರು ನೋಟಿಸ್ ಕೂಡ ನೀಡಿದ್ದಾರೆ.
ಕಳೆದ ಶನಿವಾರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ₹3 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನಿಂದ ಹಲವು ಬಾರಿ ಡ್ರಿಫ್ಟಿಂಗ್ ನಡೆಸಲಾಗಿದೆ. ಈ ಅಪಾಯಕಾರಿ ಸ್ಟಂಟ್ ಅನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಈ ಪ್ರಕರಣದಲ್ಲಿ ಕಾರಿನ ಮಾಲೀಕರಾಗಿ ಗುರುತಿಸಲ್ಪಟ್ಟಿರುವ ರಿಕ್ಕಿ ರೈ, “ಕಾರು ಓಡಿಸಿದ್ದು ನಾನು ಅಲ್ಲ” ಎಂದು ಪ್ರಾಥಮಿಕವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರು ಕಾರು ಸಂಚರಿಸಿದ ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ ̤
ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದಾಶಿವನಗರದಲ್ಲಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದು ಟೋಯಿಂಗ್ ಮೂಲಕ ಠಾಣೆಗೆ ತಂದಿದ್ದಾರೆ. ಅಲ್ಲದೆ, ರಿಕ್ಕಿ ರೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಸದ್ಯ ಲ್ಯಾಂಬೋರ್ಗಿನಿ ಕಾರನ್ನು ವಶಕ್ಕೆ ಪಡೆದಿರುವ ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸರು ರಿಕ್ಕಿ ರೈಗೆ ನೋಟಿಸ್ ಕಳುಹಿಸಿದ್ದಾರೆ.
ನಗರ ಸಂಚಾರಿ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಈ ಕುರಿತು ಮಾತನಾಡಿ, “ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಡ್ರಿಫ್ಟಿಂಗ್ ನಡೆದಿರುವುದು ವಿಡಿಯೋ ಮೂಲಕ ಸ್ಪಷ್ಟವಾಗಿದೆ. ಕಾರು ರಿಕ್ಕಿ ರೈ ಅವರಿಗೆ ಸೇರಿದದ್ದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಆದರೆ, ಮಾಲೀಕರೇ ವಾಹನ ಚಲಾಯಿಸಿದ್ದಾರೆಯೇ ಅಥವಾ ಮತ್ತೊಬ್ಬರು ಬಳಸಿದ್ದಾರೆಯೇ ಎಂಬುದರ ಕುರಿತು ಪೊಲೀಸರು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ರೀತಿಯ ನಿರ್ಲಕ್ಷ್ಯ ಚಾಲನೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ಕ್ರಮಗಳನ್ನು ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಈ ಘಟನೆ ನೀಡಿದೆ.
ಒಟ್ಟಾರೆ, ಬೆಂಗಳೂರಿನ ಹೃದಯ ಭಾಗದಲ್ಲೇ ನಡೆದ ಈ ಡ್ರಿಫ್ಟಿಂಗ್ ಪ್ರಕರಣವು ಟ್ರಾಫಿಕ್ ನಿಯಮಗಳ ಪಾಲನೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ಇಂತಹ ಅಪಾಯಕಾರಿ ಚಟುವಟಿಕೆಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.






















