ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟು ಪರಿಣಾಮವಾಗಿ ಭಾರತಕ್ಕೆ ಎಲ್‌ಪಿಜಿ (LPG) ಆಮದು ಕುಂಠಿತವಾಗಿರುವ ಹಿನ್ನಲೆಯಲ್ಲಿ, 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು 10 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳೊಂದಿಗೆ ಬದಲಾಯಿಸುವ ವರದಿಗಳ ಕುರಿತು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, “ಇದು ಕೇವಲ ಊಹಾಪೋಹ, ಮತ್ತು ಯಾವುದೇ ಊಹಾಪೋಹಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ಅಥವಾ ಸ್ಪಷ್ಟೀಕರಣವನ್ನು ನೀಡಲಾಗುವುದಿಲ್ಲ. ವದಂತಿಗಳನ್ನು ನಂಬಬೇಡಿ” ಎಂದು ಹೇಳಿದ್ದಾರೆ
ಏನಿದು ವದಂತಿ: ಗೃಹ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಬದಲಾವಣೆ ಮಾಡುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿತ್ತು. ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಸಾಗಣೆಗಳು ಕಡಿಮೆಯಾಗಿರುವುದರಿಂದ, ಭಾರತಕ್ಕೆ ಎಲ್‌ಪಿಜಿ ಸರಬರಾಜು ವ್ಯತ್ಯಯಗೊಂಡಿದೆ. 14.2 ಕೆಜಿ ಸಿಲಿಂಡರ್‌ನಲ್ಲಿ ಕೇವಲ 10 ಕೆಜಿ ಎಲ್‌ಪಿಜಿ ತುಂಬಿ ವಿತರಿಸುವ ಪ್ರಸ್ತಾವನೆ ಕುರಿತು ಚರ್ಚೆ ನಡೆಸುತ್ತಿವೆ. ಇದರ ಉದ್ದೇಶ — ಲಭ್ಯವಿರುವ ಸೀಮಿತ ಗ್ಯಾಸ್ ಸಂಗ್ರಹವನ್ನು ಹೆಚ್ಚಿನ ಮನೆಗಳಿಗೆ ತಲುಪಿಸುವುದಾಗಿದೆ ಎನ್ನಲಾಗಿತ್ತು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಈ ಕ್ರಮದ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಯಾವುದೆ ರೀತಿಯ ಪ್ರಸ್ತಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ನಂಬುವ ಮೊದಲು, ಸರ್ಕಾರ ಅಥವಾ ಅಧಿಕೃತ ತೈಲ ಕಂಪನಿಗಳ ಪ್ರಕಟಣೆಗಳನ್ನು ಮಾತ್ರ ಗಮನಿಸಬೇಕು .
ವದಂತಿಗಳಿಗೆ ಕಿವಿಗೊಡಬೇಡಿ : ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಗಾದಲ್ಲಿ ಇಟ್ಟುಕೊಂಡಿದೆ, ತೈಲ ಕಂಪನಿಗಳೊಂದಿಗೆ ಸರ್ಕಾರವು ತುರ್ತು ಸಭೆಗಳು ನಡೆಯುತ್ತಿವೆ, ಸಿಲಿಂಡರ್ ಪ್ರಮಾಣ ಕಡಿತದ ಬದಲು ಪರ್ಯಾಯ ಸರಬರಾಜು ಮಾರ್ಗಗಳ ಅನ್ವೇಷಣೆ ನಡೆಯುತ್ತಿದೆ. ಗ್ರಾಹಕರಲ್ಲಿ ಆತಂಕ ಹೆಚ್ಚುತ್ತಿರುವ ಹಿನ್ನೆಲೆ, “ರೂಮರ್‌ಗಳಿಗೆ ಒಳಗಾಗಬೇಡಿ” ಎಂದು ತಜ್ಞರು ಮನವಿ ಮಾಡಿದ್ದು, ಅಧಿಕೃತ ನಿರ್ಧಾರ ಹೊರಬರುವವರೆಗೆ ಹಳೆಯ ವ್ಯವಸ್ಥೆಯೇ ಮುಂದುವರಿಯಲಿದೆ. ವದಂತಿಗಳನ್ನು ನಂಬಬೇಡಿ. ಹಾಗೂ ನಿಜಾಂಶಗಳನ್ನು ಪರಿಶೀಲಿಸಿ. ಅನಗತ್ಯ ಗೊಂದಲಗಳಿಗೆ ಅವಕಾಶ ನೀಡಬೇಡಿ





















