Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ: ಸಿಎಂ-ಡಿಸಿಎಂ ಸಾಥ್

ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ: ಸಿಎಂ-ಡಿಸಿಎಂ ಸಾಥ್

0
88

ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾದ ಸಮರ್ಥ್ ಶಾಮನೂರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಸಾಥ್ ನೀಡಿದ್ದು, ಈ ಮೂಲಕ ಕಾಂಗ್ರೆಸ್ ಪಕ್ಷದ ಶಕ್ತಿಪ್ರದರ್ಶನ ಗಮನಸೆಳೆಯಿತು.

ಈ ಸಂದರ್ಭದಲ್ಲಿ ಸಮರ್ಥ್ ಅವರ ತಂದೆ ಮಲ್ಲಿಕಾರ್ಜುನ ಹಾಗೂ ತಾಯಿ ಪ್ರಭಾ ಮಲ್ಲಿಕಾರ್ಜುನ ಕೂಡ ಉಪಸ್ಥಿತರಿದ್ದು, ಕುಟುಂಬ ಸಮೇತ ಅಭ್ಯರ್ಥಿಗೆ ಬೆಂಬಲ ವ್ಯಕ್ತವಾಯಿತು. ಜೊತೆಗೆ ಪಕ್ಷದ ಬ್ಲಾಕ್ ಕಮಿಟಿ ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಕಾಂಗ್ರೆಸ್ ತೀರ್ಮಾನಕ್ಕೆ ಸಿಎಂ ಸ್ಪಷ್ಟನೆ : ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಮ್ಮ ಪಕ್ಷವು ಎಲ್ಲರನ್ನು ಒಳಗೊಂಡಿರುವ ಪಕ್ಷ. ಯಾವ ಶಾಸಕರು ನಿಧನರಾದರೂ ಅವರ ಕುಟುಂಬಕ್ಕೆ ಟಿಕೆಟ್ ನೀಡುವುದು ಕಾಂಗ್ರೆಸ್‌ನ ನೀತಿ. ಅದೇ ರೀತಿಯಾಗಿ ದಾವಣಗೆರೆಯಲ್ಲಿ ಸಮರ್ಥ್ ಅವರಿಗೆ ಹಾಗೂ ಬಾಗಲಕೋಟೆಯಲ್ಲಿ ಮೇಟಿ ಅವರ ಪುತ್ರರಿಗೆ ಟಿಕೆಟ್ ನೀಡಲಾಗಿದೆ” ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲಾಗಿತ್ತು. ಮುಸ್ಲಿಂ ಸಮುದಾಯದವರು ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಅಂತಿಮವಾಗಿ ಶಾಮನೂರು ಕುಟುಂಬದ ಸಮರ್ಥ್‌ಗೆ ಟಿಕೆಟ್ ನೀಡಲಾಗಿದ್ದು, ಬಿ-ಫಾರಂ ನೀಡುವ ಮುನ್ನವೇ ಅವರು ನಾಮಪತ್ರ ಸಲ್ಲಿಸಿರುವುದು ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ.

ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪ್ರಮುಖ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮತದಾರರ ಮನ ಗೆಲ್ಲಲು ತೀವ್ರ ಪ್ರಚಾರ ನಡೆಸುತ್ತಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಜಗಳ ಇನ್ನೂ ಶಮನವಾಗಿಲ್ಲ. ಮುಸ್ಲಿಂ ಸಮುದಾಯದ ಅಸಮಾಧಾನ ಮುಂದುವರಿದಿದ್ದು, ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಮತ್ತು ಇತರ ಪಕ್ಷಗಳು ಈ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆದಿದೆ.