ಗುರುಮಠಕಲ್: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ತಾಲೂಕಿನ ನಂದೆಪಲ್ಲಿ ಗ್ರಾಮದ ಸ್ವಾತಿ (21) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಪಟ್ಟಣದ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಸ್ವಾತಿ ಈಗಾಗಲೇ ನಾಲ್ಕು ಪದವಿಪೂರ್ವ ಪರೀಕ್ಷೆಗಳನ್ನು ಬರೆದಿದ್ದು, ಐದನೇ ಪರೀಕ್ಷೆಗೆ ತಯಾರಿ ಮಾಡಲು ಶುಕ್ರವಾರ ಬೆಳಗಿನ ಜಾವ `ಓದಲು ಸ್ಟಡಿ ರೂಮಿಗೆ ಹೋಗುತ್ತೇನೆ’ ಎಂದು ಹೇಳಿ ಹೋಗಿದ್ದಳು.
ಆದರೆ ಬಹಳ ಸಮಯವಾದರೂ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಹಾಸ್ಟೆಲ್‌ನ ಇತರ ವಿದ್ಯಾರ್ಥಿನಿಯರು ಸ್ಟಡಿ ಕೋಣೆಯ ಬಾಗಿಲು ತಟ್ಟಿದರು. ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಆತಂಕಗೊಂಡ ಅವರು ಬಾಗಿಲಿನ ಮೇಲಿನ ಕಿಟಕಿಯ ಗಾಜನ್ನು ಒಡೆದು ಒಳಗೆ ನೋಡಿದಾಗ ಸ್ವಾತಿ ತಮ್ಮ ದುಪ್ಪಟ್ಟವನ್ನು ಕಿಟಕಿಗೆ ಕಟ್ಟಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಧ್ಯಾಹ್ನ 12ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.




















