ಭ್ರಷ್ಟಾಚಾರಕ್ಕೆ ಬಲಿಯಾದ ಗ್ರಾಮ ಆಡಳಿತಾಧಿಕಾರಿಯ ರೆಡ್ ಹ್ಯಾಂಡ್ ಬಂಧನ
ಕಾರವಾರ: ಭ್ರಷ್ಟಾಚಾರದ ವಿರುದ್ಧ ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು, ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಮ್ಯಾಗೇರಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ.
ಭೂ ದಾಖಲೆ ಬದಲಾವಣೆಗಾಗಿ ಲಂಚ ಬೇಡಿಕೆ: ಮಾಹಿತಿಯ ಪ್ರಕಾರ, ರಾಮನಗರದ ನಿವಾಸಿ ಗುರ್ಜರ್ ಎಂಬುವವರು ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಬದಲಾವಣೆ ಮಾಡಿಕೊಡುವಂತೆ ಅಧಿಕಾರಿಯನ್ನು ಸಂಪರ್ಕಿಸಿದ್ದರು. ಈ ಕೆಲಸಕ್ಕಾಗಿ ಸಂತೋಷ್ ಮ್ಯಾಗೇರಿ ಅವರು ₹18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಇದರಿಂದ ಬೇಸತ್ತ ದೂರುದಾರರು ಈ ಕುರಿತು ಕರ್ನಾಟಕ ಲಓಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.
ಪ್ಲಾನ್ ರೂಪಿಸಿ ದಾಳಿ: ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಪೂರ್ವಯೋಜನೆಯೊಂದಿಗೆ ಕಾರ್ಯಾಚರಣೆ ನಡೆಸಿದರು. ಶುಕ್ರವಾರ ನಡೆದ ದಾಳಿಯಲ್ಲಿ, ದೂರುದಾರರಿಂದ ₹13 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಗಳು ಸ್ಥಳದಲ್ಲೇ ದಾಳಿ ನಡೆಸಿ ಸಂತೋಷ್ ಮ್ಯಾಗೇರಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ತಂಡದ ಕಾರ್ಯಾಚರಣೆ : ಈ ಯಶಸ್ವಿ ಕಾರ್ಯಾಚರಣೆ ಲೋಕಾಯುಕ್ತ ಸಿಪಿಐ ವಿನಾಯಕ್ ಬಿಲ್ಲವ ಅವರ ನೇತೃತ್ವದಲ್ಲಿ ನಡೆಯಿತು. ತಂಡದ ಇತರ ಸಿಬ್ಬಂದಿಗಳೂ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಕರಣ ದಾಖಲು: ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರೆದಿದೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದು, ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತದ ಕಟ್ಟುನಿಟ್ಟಿನ ಕ್ರಮ ಮತ್ತೆ ಚರ್ಚೆಗೆ ಕಾರಣವಾಗಿದೆ.























