Home Advertisement
Home ನಮ್ಮ ಜಿಲ್ಲೆ ಧಾರವಾಡ ವಾಣಿಜ್ಯ ಸಿಲಿಂಡರ್ ಅಭಾವ ಸಂಕಷ್ಟದಲ್ಲಿ ಹೋಟೆಲ್‌ ಉದ್ಯಮ

ವಾಣಿಜ್ಯ ಸಿಲಿಂಡರ್ ಅಭಾವ ಸಂಕಷ್ಟದಲ್ಲಿ ಹೋಟೆಲ್‌ ಉದ್ಯಮ

0
35

ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊರತೆ ವ್ಯಾಪಕವಾಗಿ ಕಂಡುಬಂದಿದ್ದು, ವಾಣಿಜ್ಯ ಸಿಲಿಂಡರ್ ಅಭಾವದಿಂದ ಹೊಟೇಲ್ ಉದ್ಯಮ ಸಂಕಷ್ಟ ಎದುರಾಗಿದೆ. ಗ್ಯಾಸ್ ಏಜೆನ್ಸಿಗಳು ಮಂಗಳವಾರದಿಂದಲೇ ವಾಣಿಜ್ಯ ಸಿಲಿಂಡರ್ ಪೂರೈಕೆ ನಿಲ್ಲಿಸಿವೆ.

ರಾಜ್ಯದಲ್ಲಿ ಸುಮಾರು 60 ಸಾವಿರ ಹೋಟೆಲ್‌ಗಳಿವೆ. ಹು-ಧಾ ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, 25 ಸಾವಿರಕ್ಕೂ ಹೆಚ್ಚು ಜನರ ಈ ಉದ್ಯಮವನ್ನು ನಂಬಿಕೊಂಡಿದ್ದಾರೆ. ಬುಧವಾರ ಮಧ್ಯಾಹ್ನದಷ್ಟೊತ್ತಿಗೆ ಶೇ. 35ರಷ್ಟು ಹೋಟೆಲ್‌ಗಳು ಬಂದ್ ಆಗಲಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಥಗಿತವಾಗಲಿವೆ ಎಂದು ಹುಬ್ಬಳ್ಳಿ ಹೋಟೆಲ್ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಎಲ್‌ಪಿಜಿ ಗ್ಯಾಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹವಿದ್ದು, ಸರಬರಾಜು ಸರಾಗವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದ್ದಾರೆ.

ಹಾವೇರಿಯಲ್ಲಿ ವಾಣಿಜ್ಯ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ಕೊರತೆ ಎದುರಾಗಿದ್ದರಿಂದ ಆಟೋ ಗ್ಯಾಸ್, ಸಿಎನ್‌ಜಿ ದರಗಳು ಏರಿಕೆಯಾಗಿವೆ. ನಗರದ ಹಾನಗಲ್ಲ ರಸ್ತೆಯಲ್ಲಿರುವ ಗೋ ಗ್ಯಾಸ್ ಬಂಕ್‌ನಲ್ಲಿ ಸಮರ್ಪಕವಾಗಿ ಗ್ಯಾಸ್ ಪೂರೈಕೆಯಾಗದ ಪರಿಣಾಮದ ಗ್ಯಾಸ್ ವ್ಯತ್ಯಯದ ಬ್ಯಾನರ್ ಹಾಕಲಾಗಿದೆ. ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ಆಟೋ ಚಾಲಕರಿಗೆ ಗ್ಯಾಸ್ ಕೊರತೆ ಸಾಧ್ಯತೆ ಇದ್ದು, ಸಹಕರಿಸಬೇಕು ಎನ್ನುವ ಬ್ಯಾನರ್ ಅಳವಡಿಸಿದ್ದರಿಂದ ಆಟೋ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ.

15 ದಿನಗಳ ಹಿಂದೆ ಕೆಜಿ ಗ್ಯಾಸ್ ಬೆಲೆ 50 ರೂ. ಇತ್ತು. ಈಗ ಕೆಜಿಗೆ ಗ್ಯಾಸ್‌ಗೆ 70 ರೂ. ಆಗಿದೆ. ಆಟೋ ಓಡಿಸಿಕೊಂಡು ದುಡಿಮೆ ಮಾಡಿಕೊಂಡು ಜೀವನ ಮಾಡುವ ನಾವು ಹೇಗೆ ಜೀವನ ಮಾಡೋದು ಎಂದು ಆಟೋರಿಕ್ಷಾ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೊಪ್ಪಳದಲ್ಲೂ ವಾಣಿಜ್ಯ ಸಿಲಿಂಡರ್‌ಗಳ ಅಭಾವ ಎದುರಾಗಿದ್ದು, ಹೋಟೆಲ್ ಮಾಲೀಕರು ಪರದಾಡುತ್ತಿದ್ದಾರೆ. ಬಹುತೇಕ ಹೋಟೆಲ್‌ಗಳಲ್ಲಿ ಕಟ್ಟಿಗೆ ಬಳಸಿ ಅಡುಗೆ ತಯಾರಿಸುತ್ತಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಬೇಗ ಉಪಹಾರ, ಊಟ ನೀಡಲಾಗುತ್ತಿಲ್ಲ. ಸಿಲಿಂಡರ್ ಸಿಗದೇ ತರಹೇವಾರಿ ಉಪಹಾರ ಮಾಡಲು ಸಾಧ್ಯವಾಗುತ್ತಿಲ್ಲ.

ಇತ್ತ ಸಾರ್ವಜನಿಕರೂ ಹೆಚ್ಚಿನ ಬುಕ್ಕಿಂಗ್ ಮಾಡುತ್ತಿದ್ದಾರೆ. ಪ್ರತಿನಿತ್ಯ 400 ಸಿಲಿಂಡರ್ ಬೇಡಿಕೆ ಇರುತ್ತಿತ್ತು. ಕೊರತೆ ಎಂಬುದನ್ನು ಕೇಳುತ್ತಲೇ, ಪ್ರತಿನಿತ್ಯ 1000 ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ. ಬೇಡಿಕೆ ಸಲ್ಲಿಕೆ ಪದ್ಧತಿ ಬದಲಾವಣೆ ಮಾಡಿದ್ದು, ಇದರಿಂದ ಜನರು ಆತಂಕಗೊಂಡಿದ್ದಾರೆ ಎಂದು ಕೊಪ್ಪಳದ ರಾಘವೇಂದ್ರ, ಗುರುಪ್ರಸಾದ್ ಏಜೆನ್ಸಿಯವರು ಮಾಹಿತಿ ನೀಡಿದ್ದಾರೆ.