ಹುಬ್ಬಳ್ಳಿ: ಅಬಕಾರಿ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳವು ದಾಖಲಿಸಿದ್ದ ಪ್ರಕರಣದಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ಅರವಿಂದ ಕೇಜ್ರಿವಾಲ್ ಸೇರಿ ಹಲವರನ್ನು ಖುಲಾಸೆಗೊಳಿಸಿದ್ದು ಸತ್ಯಕ್ಕೆ ಸಂದ ಜಯ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖಾ ಸಂಸ್ಥೆ ಒದಗಿಸಿದ ಪುರಾವೆಗಳ ಬಗ್ಗೆ ಕಟುವಾದ ಟೀಕೆಯನ್ನು ಮಾಡಿರುವ ರೋಸ್ ಅವೆನ್ಯೂ ನ್ಯಾಯಾಲಯ, ವಿಚಾರಣೆಗೆ ಒಳಪಡಿಸಬೇಕಾದ ಕನಿಷ್ಠ ಅರ್ಹತೆಯನ್ನೂ ಹೊಂದಿಲ್ಲ ಎಂದು ಛೀಮಾರಿ ಹಾಕಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂದು ಹೇಳುವ ಮೂಲಕ ಸಿಬಿಐ ವಾದಕ್ಕೆ ಬಲವಾದ ಪೆಟ್ಟನ್ನು ಕೊಟ್ಟಿದೆ. ನ್ಯಾಯಾಲಯದ ದಾರಿ ತಪ್ಪಿಸುವ ಅಂಶಗಳನ್ನು ಎತ್ತಿ ತೋರಿಸಿದ ನ್ಯಾಯಮೂರ್ತಿ ಜಿತೇಂದ್ರ ಸಿಂಗ್ ಅವರಿದ್ದ ನ್ಯಾಯಪೀಠ, ಚಾರ್ಜ್ ಶೀಟ್‌ನಲ್ಲಿ ಹಾಕಲಾಗಿರುವ ಲೋಪದೋಷಗಳ ಪಟ್ಟಿಗೆ ಯಾವುದೇ ಬಲವಾದ ಪುರಾವೆಗಳೂ ಇಲ್ಲ, ಸಾಕ್ಷಿಗಳೂ ಇಲ್ಲ ಎಂದು ಹೇಳಿದೆ ಎಂದರು.
ಕೇಂದ್ರ ಸರ್ಕಾರದ ಸುಳ್ಳಿನ ಷಢ್ಯಂತ್ರದಿಂದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ತೆಲಂಗಾಣದ ಮಾಜಿ ಸಿಎಂ ಕೆಸಿಆರ್ ಅವರ ಪುತ್ರಿ ಕವಿತಾ, ಸೇರಿದಂತೆ ಇತರರಿಗೆ ಜಯ ಲಭಿಸಿದೆ ಎಂದರು. ಕೇಂದ್ರ ಸರ್ಕಾರ ಜನಸೇವೆ ಮಾಡುವ ಮೂಲಕ ಅಧಿಕಾರದಲ್ಲಿ ಉಳಿಯುವುದನ್ನು ಕಲಿಯಬೇಕು. ಸುಳ್ಳು ಕೇಸ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಮಾಡಬಾರದು. ಸಂವಿಧಾನವನ್ನು ನಿಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳದೇ, ಸಂವಿಧಾನದ ಪ್ರಕಾರ ಆಡಳಿತ ನಡೆಸುವುದನ್ನು ಮೋದಿ ಕಲಿಯಬೇಕು ಎಂದು ಕಿಡಿಕಾರಿದರು.




















