ಯಾದಗಿರಿ: ಸ್ವಯಂ ಘೋಷಿತ ದೇವಮಾನವ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ಪೊಲೀಸರ ನೋಟಿಸ್ ಬಳಿಕವೂ ಮಲ್ಲಿಕಾರ್ಜುನ್ ಮುತ್ಯಾ ಈ ವರೆಗೆ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ. ಆದಾಗ್ಯೂ ಮುತ್ಯಾ ಕೇಸ್ ರದ್ದತಿಗೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಭಕ್ತರು ಬೃಹತ್ ಪ್ರಮಾಣದಲ್ಲಿ ಜಮಾವಣೆಗೊಂಡು ಶ್ರೀಮಠದಲ್ಲಿ ಸಭೆ ನಡೆಸಿ ಕೇಸ್ ರದ್ದು ಮಾಡಲು ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ನೀಡಿದ್ದಾರೆ.
ಇನ್ನು ಶುಕ್ರವಾರ ಪ್ರತ್ಯಕ್ಷರಾಗುವ ಸಾಧ್ಯತೆ ಇತ್ತಾದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮಹಲ್ ರೋಜಾ ಮಠದ ಸ್ವಯಂ ಘೋಷಿತ ದೇವಮಾನ ಮಲ್ಲಿಕಾರ್ಜುನ ಮುತ್ಯಾಗೆ ಬಂಧನ ಭೀತಿ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಯಾದಗಿರಿ ಪೊಲೀಸರು ನೋಟಿಸ್ ನೀಡಿದರೂ ಮುತ್ಯಾನ ಸುಳಿವಿಲ್ಲ.
ಬದಲಾಗಿ ಪೋಕ್ಸೋ ಕೇಸ್ ರದ್ದು ಕೋರಿ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆ ನಡೆಯಲಿದೆ. ಪೋಷಕರೇ ದೂರು ನೀಡಿಲ್ಲ, ಆದ್ರೂ ಎಫ್ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ ಮಹತ್ತರ ಬೆಳೆವಣಿಗೆ ಸಹ ನಡೆದಿದ್ದು, ಸ್ವಯಂ ಘೋಷಿತ ದೇವಮಾನ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ದಾಖಲು ಮಾಡಿರುವುದು ಶ್ರೀಮಠದ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಹಿನ್ನೆಲೆಯಲ್ಲಿ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಆವರಣದಲ್ಲಿ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸೇರಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತರು ತುರ್ತು ಸಭೆ ನಡೆಸಿದರು. ಈ ವೇಳೆ ಮುತ್ಯಾ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ ಭಕ್ತರು, ಪ್ರಕರಣದ ಹಾದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ನಂತರ ಮಾತನಾಡಿದ ಭಕ್ತರು, ‘ನಮ್ಮ ಅಪ್ಪಾಜಿಯ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಅವರ ಹೆಸರನ್ನು ಹಾಳು ಮಾಡಲು ವಿಡಿಯೋವನ್ನು ತಿರುಚಲಾಗಿದೆ’ ಎಂದು ಆಕ್ರೋಶ ವ್ಯಕ್ತವಾಗಿದೆ. ಮುಂದಿನ ಕಾನೂನು ಹೋರಾಟ ಸೇರಿ ಮಹತ್ವದ ನಿರ್ಣಯಗಳನ್ನು ಮಾಡಲಾಗಿದೆ .ಇದೇ ವೇಳೆ ಕೇಸ್ ವಾಪಸ್ ತೆಗೆದುಕೊಳ್ಳಲು ಯಾದಗಿರಿ ಜಿಲ್ಲಾಡಳಿತಕ್ಕೆ ಎರಡು ದಿನಗಳ ಗಡುವು ನೀಡಲಾಗಿದೆ.
ಬಿಜೆಪಿ ನಾಯಕಿ ಲಲಿತಾ ಅನಪುರ ಅವರು ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅಪ್ರಾಪ್ತೆ ಮತ್ತು ಪೋಷಕರು ದೂರು ನೀಡದೇ ಇದ್ದರೂ ಎಫ್ಐಆರ್ ದಾಖಲಿಸಿದ್ದಾರೆ. ಇದು ಪ್ರಕರಣವನ್ನ ರದ್ದು ಮಾಡಬೇಕು. ಅಪ್ರಾಪ್ತೆಯ ಹೇಳಿಕೆಯನ್ನೂ ಪಡೆಯದೆ ಎಫ್ಐಆರ್ ದಾಖಲಿಸಲಾಗಿದೆ. ಇಲ್ಲಿ ಜಿಲ್ಲಾಡಳಿತ ಎಡವಿದ್ದು, ಕೇಸ್ ರದ್ದು ಮಾಡಲು ಎರಡು ದಿನ ಗಡುವು ನೀಡುತ್ತೇವೆ. ಆ ಬಳಿಕವೂ ಪ್ರಕರಣ ರದ್ದು ಮಾಡದಿದ್ದಲ್ಲಿ ಭಕ್ತರು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಜಿಲ್ಲೆಯಾದ್ಯಂತ ಎಸ್ಪಿ, ಡಿಸಿ ಕಚೇರಿ ಎದುರು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದಿದ್ದಾರೆ.























