ಬೆಂಗಳೂರು: ಸಿನಿಮಾ ರಂಗದಲ್ಲಿ ಮಿಂಚಬೇಕೆಂಬ ಹಂಬಲದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ-ನಟಿಯರು, ಈಗ ಅಡ್ಡಹಾದಿ ಹಿಡಿದು ಜೈಲು ಪಾಲಾಗಿದ್ದಾರೆ. ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ನಟಿ ಐಶ್ವರ್ಯಾ ಮತ್ತು ಆಕೆಯ ತಂಡ ಸ್ವಂತ ಚಿತ್ರದ ನಿರ್ದೇಶಕನನ್ನೇ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ನಿರ್ದೇಶಕ ಅನೀಶ್ ‘ಜೀವನದ ಭಾಷೆ’ ಎಂಬ ಸಿನಿಮಾ ಮಾಡಲು ಕನಸು ಕಂಡಿದ್ದರು. ಈ ಚಿತ್ರಕ್ಕೆ ಆಶೀರ್ವಾದ್ ಎಂಬ ನಟ ಸುಮಾರು 5 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದರು. ಆದ್ರೆ ಕೆಲವು ಕಾರಣಗಳಿಂದ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು ಎನ್ನಲಾಗುತ್ತಿದೆ. ಹೀಗಾಗಿ ಹಾಕಿದ ಹಣ ವಾಪಸ್ ಬರಲಿಲ್ಲ ಮತ್ತು ಅಂದುಕೊಂಡಂತೆ ಅವಕಾಶಗಳು ಸಿಗಲಿಲ್ಲ ಎಂಬ ಆಕ್ರೋಶ ನಟ ಆಶೀರ್ವಾದ್ ಮತ್ತು ನಟಿ ಐಶ್ವರ್ಯಾ ತಂಡದಲ್ಲಿ ಮನೆಮಾಡಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಇಡೀ ಗ್ಯಾಂಗ್ ನಿರ್ದೇಶಕ ಅನೀಶ್ ವಿರುದ್ಧ ಸ್ಕೆಚ್ ಹಾಕಿತ್ತು.
ಹಾಗೇ ನಿರ್ದೇಶಕ ಅನೀಶ್ ತಮ್ಮ ಕೆಲಸದ ನಿಮಿತ್ತ ಮುಂಬೈಗೆ ಶಿಫ್ಟ್ ಆಗಿದ್ದರು. ಅವರನ್ನು ಬೆಂಗಳೂರಿಗೆ ಕರೆಸಲು ನಟಿ ಐಶ್ವರ್ಯಾಳನ್ನು ದಾಳವಾಗಿ ಬಳಸಿಕೊಂಡ ತಂಡ, “ನನ್ನ ಹತ್ತಿರ ಒಂದು ಕಾರಿದೆ, ಅದನ್ನು ಮಾರಾಟ ಮಾಡಿಕೊಡು” ಎಂದು ನಂಬಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಅನೀಶ್ ಆಡುಗೋಡಿ ಬಳಿ ಬರುತ್ತಿದ್ದಂತೆ, ಐಶ್ವರ್ಯಾ ಸೇರಿದಂತೆ 11 ಜನರ ಗ್ಯಾಂಗ್ ಅವರನ್ನು ಕಿಡ್ನಾಪ್ ಮಾಡಿದ್ದಾರೆ.
ನಂತರ ನಗರದ ಹೊರವಲಯದ ನಿರ್ಜನ ಪ್ರದೇಶದ ರೂಮ್ ಒಂದರಲ್ಲಿ ಅನೀಶ್‌ನನ್ನು ಕೂಡಿಹಾಕಿದ ಈ ತಂಡ ರಾಕ್ಷಸರಂತೆ ವರ್ತಿಸಿದೆ. ಕ್ರಿಕೆಟ್ ಸ್ಟಂಪ್ ಮತ್ತು ಹಾಕಿ ಸ್ಟಿಕ್‌ಗಳಿಂದ ಮನಬಂದಂತೆ ಥಳಿಸಿ, ಮೈಮೇಲಿದ್ದ ಚಿನ್ನದ ಸರ, ಉಂಗುರ ಮತ್ತು ಹಣವನ್ನೆಲ್ಲಾ ದೋಚಿದ್ದಾರೆ. ಅಷ್ಟಕ್ಕೇ ನಿಲ್ಲದೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಅನೀಶ್‌ನನ್ನು ತುಮಕೂರಿನ ಮಧುಗಿರಿ ಬೆಟ್ಟದ ಬಳಿ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅನೀಶ್ ಹೇಗೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ನೀಡಿದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಆಡುಗೋಡಿ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಲೊಕೇಶನ್ ಆಧರಿಸಿ ಸಿನಿಮಾ ಸ್ಟೈಲ್‌ನಲ್ಲೇ ಕಾರ್ಯಾಚರಣೆ ನಡೆಸಿ ನಟಿ ಐಶ್ವರ್ಯಾ, ಆಶೀರ್ವಾದ್ ಸೇರಿದಂತೆ ಇಡೀ ಗ್ಯಾಂಗ್‌ಗೆ ಬೇಡಿ ತೊಡಿಸಿದ್ದಾರೆ.
ಸಿನಿಮಾದಲ್ಲಿ ಹೀರೋಗಳಾಗಿ ಮಿಂಚಬೇಕಿದ್ದ ಕೈಗಳು ಇಂದು ಹಲ್ಲೆ ಮತ್ತು ಕಿಡ್ನಾಪ್ ಕೇಸ್‌ನಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲು ಸೇರಿವೆ. “ಕಾನೂನು ಕೈಗೆತ್ತಿಕೊಂಡರೆ ಭವಿಷ್ಯ ಏನಾಗುತ್ತದೆ?” ಎಂಬುದಕ್ಕೆ ಈ ಘಟನೆಯೇ ದೊಡ್ಡ ಸಾಕ್ಷಿಯಾಗಿದೆ.























