ದಾವಣಗೆರೆ: ವಿಕಸಿತ ಭಾರತ 2047ರ ಗುರಿ ತಲುಪಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಭಿವೃದ್ಧಿಯ ಮುನ್ಸೂಚನೆ ನೀಡಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಸಮೀಪದ ತೋಳಹುಣಸೆ ಗ್ರಾಮದಲ್ಲಿ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ರೈಲ್ವೆ ಮತ್ತು ಜಲಶಕ್ತಿ ಇಲಾಖೆಗಳಲ್ಲಿ ಮಹತ್ತರ ಯೋಜನೆಗಳು ಜಾರಿಯಾಗುತ್ತಿವೆ ಎಂದರು.
ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುವುದಿಲ್ಲ. ಜನರ ಅನುಕೂಲಕ್ಕಾಗಿ ರೈಲ್ವೆ ಮತ್ತು ಜಲಶಕ್ತಿ ಇಲಾಖೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು ಎಂದರು.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻವಿರೋಶ್ʼ ಜೋಡಿ
ರೈಲ್ವೆ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಅನುದಾನ: ರೈಲ್ವೆ ಇಲಾಖೆಯ ಹಳೆಯ ಕಾಮಗಾರಿಗಳ ಪೂರ್ಣಗೊಳಿಸಲು ಈಗಾಗಲೇ 52 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಈ ಸಾಲಿನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗಾಗಿ 7,800 ಕೋಟಿ ರೂ. ಹಣ ಮೀಸಲಿಡಲಾಗಿದೆ. ಬೆಂಗಳೂರು-ತುಮಕೂರು, ದಾವಣಗೆರೆ-ರಾಯದುರ್ಗ ಹಾಗೂ ತಾಳಗುಪ್ಪ ರೈಲ್ವೆ ಮಾರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
ಭೂಸ್ವಾಧೀನ ಪ್ರಕ್ರಿಯೆ ಅಂತ್ಯಕ್ಕೆ ಸಿದ್ಧತೆ: ದಾವಣಗೆರೆಯಿಂದ ತುಮಕೂರು ವರೆಗಿನ ರೈಲ್ವೆ ಯೋಜನೆಗೆ ಒಟ್ಟು 2 ಸಾವಿರ ಎಕರೆ ಭೂಮಿ ಅಗತ್ಯವಿದ್ದು, ಕೇವಲ 246 ಎಕರೆ ಹೊರತುಪಡಿಸಿ ಬಾಕಿ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಮುಂದಿನ 2-3 ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ವೇಗಗೊಳಿಸಲಾಗುವುದು ಎಂದರು.
ಇದನ್ನೂ ಓದಿ: ಅಂಕಣ ಬರಹ: ಆರೋಪಕ್ಕೆಲ್ಲ `ಷಡ್ಯಂತ್ರ – ಜಾತಿ’ ಗಳೇ ಗುರಾಣಿ!
ಜಲಜೀವನ್ ಮಿಷನ್ ಅಡಿ 15 ಕೋಟಿ ಮನೆಗಳಿಗೆ ನೀರು: ಜಲಶಕ್ತಿ ಇಲಾಖೆಯ ಸಾಧನೆ ಹಂಚಿಕೊಂಡ ಸಚಿವರು, ಮೋದಿಯವರು ಅಧಿಕಾರಕ್ಕೆ ಬಂದಾಗ ಕೇವಲ 3 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿತ್ತು. ಇಂದು ಆ ಸಂಖ್ಯೆ 15.67 ಕೋಟಿ ಮನೆಗಳಿಗೆ ಏರಿಕೆಯಾಗಿದೆ. ಇದಕ್ಕಾಗಿ 5 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ಯೋಜನೆಗಳ ಕುರಿತು ಶೀಘ್ರವೇ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳೊಂದಿಗೆ ಸಭೆ ನಡೆಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.























