Home Advertisement
Home ಸುದ್ದಿ ದೇಶ ಕೇಂದ್ರದ ಮಾಜಿ ಸಚಿವ, ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ

ಕೇಂದ್ರದ ಮಾಜಿ ಸಚಿವ, ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ

0
80

ರಾಜಕೀಯ ಏರಿಳಿತಗಳ ನಡುವೆ ಚಾಣಕ್ಯ ಮುಕುಲ್ ರಾಯ್ ಅಂತ್ಯ

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ “ಚಾಣಕ್ಯ” ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಾಯಕ Mukul Roy (71) ಅವರು ನಿಧನರಾಗಿದ್ದಾರೆ. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಗಿನ ಜಾವ 1.30ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಬಹುಕಾಲದಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಕೋಮಾ ಸ್ಥಿತಿಗೆ ಜಾರಿದ್ದರು. ಅದಕ್ಕೂ ಮೊದಲು ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ.

ಕಳೆದ ಎರಡು ವರ್ಷಗಳಿಂದ ಮುಕುಲ್ ರಾಯ್ ಆರೋಗ್ಯ ಸಮಸ್ಯೆಗಳ ಹಿನ್ನೆಲೆ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಪರಿಚಿತ ಮುಖಗಳನ್ನು ಗುರುತಿಸುವ ಸಾಮರ್ಥ್ಯವೂ ಕಡಿಮೆಯಾಗಿತ್ತು. ರೈಲ್ಸ್ ಟ್ಯೂಬ್ ಮೂಲಕ ದ್ರವ ಆಹಾರ ನೀಡಲಾಗುತ್ತಿತ್ತು. ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರು ನಿಗಾ ವಹಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.

ಅವರ ಪಾರ್ಥಿವ ದೇಹವನ್ನು ಕೋಲ್ಕತ್ತಾದ ನಿವಾಸಕ್ಕೆ ಕರೆತರಲಾಗಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಮತಾ ಬ್ಯಾನರ್ಜಿ ಆಪ್ತ ಬಿಜೆಪಿಗೆ: ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರಾಗಿದ್ದ ಮುಕುಲ್ ರಾಯ್, ತೃಣಮೂಲ ಕಾಂಗ್ರೆಸ್‌ನಲ್ಲಿ ಎರಡನೇ ಅತಿ ಪ್ರಭಾವಿ ನಾಯಕರಾಗಿ ಪರಿಗಣಿಸಲ್ಪಟ್ಟಿದ್ದರು. 1998ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಿಂದಲೇ ಅವರು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ 2017ರಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಂಡು ಅವರು ಬಿಜೆಪಿಗೆ ಸೇರ್ಪಡೆಯಾದರು. ಈ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

2019 ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ : 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಸಾಧನೆ ತಂದುಕೊಡುವಲ್ಲಿ ಮುಕುಲ್ ರಾಯ್ ಪ್ರಮುಖ ಕಾರ್ಯತಂತ್ರ ರೂಪಿಸಿದವರಾಗಿದ್ದರು. 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲುವಲ್ಲಿ ಅವರ ರಾಜಕೀಯ ತಂತ್ರದ ಪಾತ್ರ ಮಹತ್ವದ್ದಾಗಿತ್ತು.

ಮರಳಿ ಟಿಎಂಸಿಗೆ ವಾಪಸು: 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣನಗರದಿಂದ ಗೆದ್ದ ಅವರು, ಬಳಿಕ ಪಕ್ಷದೊಳಗಿನ ಪ್ರಭಾವ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದರು. ಈ ರಾಜಕೀಯ ತಿರುವು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಯಿತು.

2025ರಲ್ಲಿ ಕಲ್ಕತ್ತಾ ಹೈಕೋರ್ಟ್ ಅವರು ಟಿಎಂಸಿಗೆ ಮರಳಿರುವುದು ಪಕ್ಷಾಂತರ ವಿರೋಧಿ ಕಾನೂನಿನ ಉಲ್ಲಂಘನೆ ಎಂದು ತೀರ್ಪು ನೀಡಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿತ್ತು.

ರಾಜಕೀಯ ಚಾಣಕ್ಯನ ಅಂತಿಮ ಅಧ್ಯಾಯ: ರಾಜಕೀಯ ತಂತ್ರಜ್ಞತೆ, ಸಂಘಟನೆ ಕೌಶಲ್ಯ ಮತ್ತು ನಿರ್ಣಾಯಕ ನಡೆಗಳಿಂದ “ಬಂಗಾಳದ ಚಾಣಕ್ಯ” ಎಂದು ಹೆಸರು ಮಾಡಿದ್ದ ಮುಕುಲ್ ರಾಯ್ ಅವರ ನಿಧನದಿಂದ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಒಂದು ಅಧ್ಯಾಯ ಅಂತ್ಯಗೊಂಡಂತಾಗಿದೆ. ವಿವಿಧ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

Previous articleಹನುಮ ಜನ್ಮಭೂಮಿಯಲ್ಲಿ ರಿಷಬ್ ಶೆಟ್ಟಿ ʻಜೈ ಹನುಮಾನ್’ ಮುಹೂರ್ತ
Next articleಫೆಬ್ರವರಿ 27ಕ್ಕೆ ‘ಹಯಗ್ರೀವ’ ಬಿಡುಗಡೆ: ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ