ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಮುಖ್ಯಮಂತ್ರಿಗೆ ಪತ್ರ ಬರೆದ ಶಾಸಕ ದೇಶಪಾಂಡೆ
ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸಂಬಂಧಿಸಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಳಿಯಾಳ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆ ಸರ್ಕಾರದ ಗಮನ ಸೆಳೆದಿದ್ದಾರೆ. ಜಿಲ್ಲೆಯ ಜನಾರೋಗ್ಯದ ಹಿತದೃಷ್ಠಿಯಿಂದ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರಿಗೆ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: YUVIKA-2026: ಮಕ್ಕಳಿಗೆ ISROದಿಂದ ಬಾಹ್ಯಾಕಾಶ ತರಬೇತಿ ಅವಕಾಶ
ಕ್ರೀಮ್ಸ್ ಅಭಿವೃದ್ಧಿಗೆ ಪ್ರಸ್ತಾಪ : ಕಾರವಾರ ಜಿಲ್ಲಾಕೇಂದ್ರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ Karwar Institute of Medical Sciences (ಕ್ರೀಮ್ಸ್) ಸಂಸ್ಥೆ ಮೂಲಭೂತ ಸೌಕರ್ಯಗಳೊಂದಿಗೆ ಆರೋಗ್ಯ ಸೇವೆ ನೀಡುತ್ತಿದೆ. ಈ ಸಂಸ್ಥೆಗೆ ಹೆಚ್ಚುವರಿ ಮೂಲಸೌಕರ್ಯ ಮತ್ತು ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಒದಗಿಸುವ ಮೂಲಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಬಹುದು ಎಂದು ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ವಿವಿಧ ತಾಲೂಕು ಕೇಂದ್ರಗಳಲ್ಲಿ ಹೋರಾಟಗಳು ನಡೆದಿದ್ದು, ಜನರಲ್ಲಿ ಈ ಬೇಡಿಕೆ ಬಲವಾಗುತ್ತಿದೆ. ಹೃದಯ, ಮೂತ್ರಪಿಂಡ, ನರರೋಗ, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನರು ಹುಬ್ಬಳ್ಳಿ, ಮಂಗಳೂರು ಅಥವಾ ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾಗಿರುವುದು ದೊಡ್ಡ ಸಮಸ್ಯೆಯಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್: ಕರ್ನಾಟಕ ತಂಡ ಪ್ರಕಟ-ಭರ್ಜರಿ ಸಿದ್ಧತೆ
ಕ್ರೀಮ್ಸ್ ಸಂಸ್ಥೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಿದರೆ: ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗಗಳ ಜನರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯ, ತುರ್ತು ಚಿಕಿತ್ಸೆಗೆ ಸಮಯೋಚಿತ ವೈದ್ಯಕೀಯ ನೆರವು, ಬಡ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಭಾರ ಕಡಿಮೆ. ವೈದ್ಯಕೀಯ ಶಿಕ್ಷಣ ಮತ್ತು ತಜ್ಞರ ನೇಮಕಾತಿಗೆ ಉತ್ತೇಜನ ಮೂಲಕ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ದೊಡ್ಡದಾಗಿರುವುದರಿಂದ ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬರುವ ರಾಜ್ಯ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ವಿಶೇಷ ಅನುದಾನ ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಘಟನೆಗಳು ಸಹ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿವೆ.























