ದಾಂಡೇಲಿಯ ಮಗಳ ಸಾಧನೆಗೆ ಸಾಮಾಜಿಕ ಸಂಘಟನೆಗಳಿಂದ ಸನ್ಮಾನ ಗೌರವ
ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರದ ತೀರಾ ಬಡ ಕುಟುಂಬದಲ್ಲಿ ಬೆಳೆದ 30 ವರ್ಷದ ಪದ್ಮಾವತಿ ಎನ್.ಎಂ. ಅವರು 2025ರ ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.
ಪದ್ಮಾವತಿ ಅವರ ಕುಟುಂಬ ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಜೀವನೋಪಾಯಕ್ಕಾಗಿ ಅವರ ತಂದೆ ನಾಗಣ್ಣ ಮಾದಾರ ದಾಂಡೇಲಿಗೆ ವಲಸೆ ಬಂದು ನೆಲೆಸಿದ್ದರು. ಬಾಂಬು ಗೇಟ್ ಸಮೀಪದ ಗುಡಿಸಲೊಂದರಲ್ಲಿ ಕುಟುಂಬ ಸಮೇತ ವಾಸಿಸುತ್ತಾ, ಪಾದರಕ್ಷೆ ಹೊಲಿಯುವ ವೃತ್ತಿ ನಡೆಸಿ ಜೀವನ ಸಾಗಿಸುತ್ತಿದ್ದರು. ಐದು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿರುವ ಈ ಕುಟುಂಬದಲ್ಲಿ ಎರಡನೇ ಮಗಳಾದ ಪದ್ಮಾವತಿ ತಮ್ಮ ಪರಿಶ್ರಮ, ಧೈರ್ಯ ಮತ್ತು ವಿದ್ಯಾಭ್ಯಾಸದ ಮೂಲಕ ಈ ಉನ್ನತ ಸ್ಥಾನಕ್ಕೆ ಏರಿದ್ದಾರೆ.
ಇದನ್ನೂ ಓದಿ: ಅಂಕೋಲಾ: ಸರಣಿ ಅಪಘಾತ -12 ವಿದೇಶಿಗರು ಸೇರಿ 28 ಮಂದಿಗೆ ಗಾಯ
ಪದ್ಮಾವತಿ ಅವರು ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜಿನವರೆಗೆ ಶಿಕ್ಷಣವನ್ನು ದಾಂಡೇಲಿಯಲ್ಲೇ ಪೂರ್ಣಗೊಳಿಸಿ, ಬಳಿಕ ಬೈಲಹೊಂಗಲದಲ್ಲಿ ಕಾನೂನು ಪದವಿ ಪಡೆದರು. ನಂತರ ಹಳಿಯಾಳ ನ್ಯಾಯಾಲಯದಲ್ಲಿ ಸುಮಾರು ಏಳು ವರ್ಷಗಳ ಕಾಲ ವಕೀಲ ವೃತ್ತಿ ನಡೆಸಿ ನ್ಯಾಯಾಂಗ ಸೇವೆಗೆ ತಯಾರಿ ನಡೆಸಿದರು. 2025ರ ನ್ಯಾಯಾಂಗ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಹಿನ್ನಲೆ ಏನೇ ಇರಲಿ, ನ್ಯಾಯಾಸನದಲ್ಲಿ ಕುಳಿತುಕೊಳ್ಳುವ ಅಧಿಕಾರಿಗೆ ಅವರ ನ್ಯಾಯನಿಷ್ಠೆ, ಕಾನೂನು ಜ್ಞಾನ ಮತ್ತು ನಿಷ್ಪಕ್ಷಪಾತತೆ ಮುಖ್ಯವಾಗಿದ್ದು, ಪದ್ಮಾವತಿ ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ. ಬಡತನದಲ್ಲೂ ದೊಡ್ಡ ಕನಸುಗಳನ್ನು ಬೆಳೆಸಿ ಸಾಧನೆ ಮಾಡಬಹುದು ಎಂಬುದಕ್ಕೆ ಅವರ ಜೀವನವೇ ಉದಾಹರಣೆಯಾಗಿದೆ.
ಇದನ್ನೂ ಓದಿ: ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಸಾರ್ವಜನಿಕ ಸಂಘಟನೆಗಳಿಂದ ಸನ್ಮಾನ: ಸ್ಥಳೀಯ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ ಸೇರಿದಂತೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಪದ್ಮಾವತಿ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ರತ್ನದೀಪ್, ಎ.ಸಿ.ಎಫ್. ಸಂತೋಷ ಚವ್ಹಾಣ್, ಸರ್ಕಾರಿ ಅಭಿಯೋಜಕ ರಮೇಶ್ ಬಂಕಾಪುರ, ವಕೀಲರಾದ ಜಯಾ ಡಿ. ನಾಯ್ಕ್, ಸುಮಿತ್ರಾ ಉರೇಕುಂಡಿ, ಶೈಲಾ ನಾಮಧಾರಿ, ಅಫ್ರಿನ್ ಕಿತ್ತೂರು, ರಾಜಶೇಖರ್, ಮಂಜುನಾಥ್, ಪಿ.ಎಸ್.ಐ. ಕಿರಣ್ ಪಾಟೀಲ, ಅಮೀನ್ ಅತ್ತಾರ್, ರಾಜ್ಯಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ. ಸ್ಯಾಮಸನ್ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ಎನ್. ವಾಸರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.























