ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಅತ್ಯಂತ ಬಾಲಿಷ, ರಾಜಕೀಯ ಪ್ರೇರಿತ ಮತ್ತು ಹತಾಶೆಯ ಪ್ರತೀಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಈ ಒಪ್ಪಂದವು ‘ವಿಕಸಿತ ಭಾರತ’ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದ್ದಾರೆ. ಆದರೆ, ಅಭಿವೃದ್ಧಿಯ ಅರಿವಿಲ್ಲದ ಕಾಂಗ್ರೆಸ್ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ದೇಶದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟು: ವಿರೋಧ ಪಕ್ಷದ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಮಹಿಳಾ ಸಂಸದರ ಒತ್ತಾಯ
ಮುಖ್ಯಮಂತ್ರಿಗಳು ಈ ಒಪ್ಪಂದವನ್ನು ‘ರೈತರ ಮರಣಶಾಸನ’ ಎಂದು ಕರೆಯುವ ಮೂಲಕ ರೈತರಲ್ಲಿ ಅನಗತ್ಯ ಭೀತಿ ಹುಟ್ಟಿಸುತ್ತಿದ್ದಾರೆ. ವಾಸ್ತವದಲ್ಲಿ, ಈ ಒಪ್ಪಂದದಿಂದ ಭಾರತೀಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ತೆರೆದುಕೊಳ್ಳಲಿದೆ. ಜೊತೆಗೆ, ಕೃಷಿ ತಂತ್ರಜ್ಞಾನದ ವರ್ಗಾವಣೆಯಿಂದ ಇಳುವರಿ ಹೆಚ್ಚಳವಾಗಲಿದೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ ಹಿತವನ್ನು ಕಡೆಗಣಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಇಂದು ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿತ: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದ ಶೆಟ್ಟರ್, ಮುಡಾ ಹಗರಣ, ವಾಲ್ಮೀಕಿ ನಿಗಮದ ಅವ್ಯವಹಾರ ಮತ್ತು ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಮೋದಿ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಇದನ್ನೂ ಓದಿ: ನಂದಿನಿ (ಬಮುಲ್) ಬ್ರಾಂಡ್ ಅಂಬಾಸಿಡರ್ ಆಗಿ ಸುಧಾ ರಾಣಿ ನೇಮಕ
ಗೌತಮ್ ಅದಾನಿ ಅಥವಾ ಎಪ್ಸ್ಟೀನ್ ಫೈಲ್ಸ್ ವಿಚಾರಗಳನ್ನು ವ್ಯಾಪಾರ ಒಪ್ಪಂದಕ್ಕೆ ತಳುಕು ಹಾಕಿರುವುದು ಮುಖ್ಯಮಂತ್ರಿಗಳ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. ರಾಜತಾಂತ್ರಿಕ ಸಂಬಂಧಗಳ ಅರಿವಿಲ್ಲದೆ ದ್ವೇಷ ರಾಜಕಾರಣ ಮಾಡುವುದರಿಂದ ಮುಖ್ಯಮಂತ್ರಿ ಹುದ್ದೆಗೆ ಗೌರವ ತರುವುದಿಲ್ಲ ಎಂದು ಹೇಳಿದ್ದಾರೆ.
ಉದ್ಯೋಗ ಮತ್ತು ಹೂಡಿಕೆಗೆ ಉತ್ತೇಜನ: ಈ ವ್ಯಾಪಾರ ಒಪ್ಪಂದದಿಂದ ಭಾರತಕ್ಕೆ ಹೆಚ್ಚಿನ ಬಂಡವಾಳ ಹರಿದು ಬರಲಿದ್ದು, ಉತ್ಪಾದನಾ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತೈಲ ಆಮದಿನ ವೈವಿಧ್ಯೀಕರಣವು ದೇಶದ ಇಂಧನ ಭದ್ರತೆಗೆ ಅಗತ್ಯವಾಗಿದ್ದು, ಬೆಲೆ ಏರಿಕೆಗೆ ಕಾರಣವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮೈಸೂರ್ ಸ್ಯಾಂಡಲ್‌ಸೋಪ್ ರಾಯಭಾರಿಯಾಗಿ ತಮನ್ನಾ
ದೇಶದ ಗೌರವ ಮತ್ತು ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವ ಹೇಳಿಕೆಗಳನ್ನು ಹಿಂಪಡೆದು ಮುಖ್ಯಮಂತ್ರಿ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಸತ್ ನಡವಳಿಕೆಗೆ ಟೀಕೆ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ಉತ್ತರ ನೀಡಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪ ಅಸಂಬದ್ಧವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ. ಸಂಸತ್‌ನಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಲಾಗಿದ್ದರೂ, ಕಾಂಗ್ರೆಸ್ ಗಂಭೀರ ಚರ್ಚೆ ನಡೆಸುತ್ತಿಲ್ಲ ಎಂದು ಅವರು ದೂರಿದ್ದಾರೆ. ಸ್ಪೀಕರ್ ಪೀಠಕ್ಕೆ ಗೌರವ ನೀಡದೇ ಸದನದ ನಿಯಮಗಳನ್ನು ಉಲ್ಲಂಘಿಸುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಟೀಕಿಸಿದ್ದಾರೆ.
ಲೋಕಸಭೆ ಸ್ಪೀಕರ್ ವಿರುದ್ಧ ಪಕ್ಷಪಾತದ ಆರೋಪ ಮಾಡುವುದು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ. ತುರ್ತು ಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದವರೇ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಶೆಟ್ಟರ್ ಕಿಡಿಕಾರಿದ್ದಾರೆ.





















