Home Advertisement
Home ಸುದ್ದಿ ರಾಜ್ಯ ಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆ

ಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆ

0
26

ಬೆಂಗಳೂರು: ಗೇಮಿಂಗ್‌ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನು ಕೊಲೆ ಮಾಡಿದ ಅಪರಾಧ ಪ್ರಜ್ಞೆಯಿಂದ ಮನನೊಂದಿದ್ದ ಕುಟುಂಬವೊಂದು ಬಿಹಾರ ಪ್ರವಾಸದ ವೇಳೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಿವಾಸಿಗಳಾದ ನಾಗಪ್ರಸಾದ್ (50), ಆತನ ತಾಯಿ ಸುಮಂಗಲಾ (78), ಸಹೋದರಿಯರಾದ ಶಿಲ್ಪಾ (48) ಹಾಗೂ ಶ್ರುತಾ (43) ಮೃತಪಟ್ಟ ದುರ್ದೈವಿಗಳು. ಮೃತರು ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು.

ಕೆಲ ತಿಂಗಳ ಹಿಂದೆ ನಾಗಪ್ರಸಾದ್ ತನ್ನ ಅಕ್ಕ ಶಿಲ್ಪಾ ಅವರ ಮಗ ಅಮೋಘ ಕೀರ್ತಿ (14) ಎಂಬಾತನನ್ನು ಕೊಲೆ ಮಾಡಿದ್ದ ಎನ್ನಲಾಗಿದೆ. ಬಾಲಕ ಅಮೋಘ ಕೀರ್ತಿ ಕಳೆದ ಎಂಟು ತಿಂಗಳಿಂದ ಮಾವ ನಾಗಪ್ರಸಾದ್ ಜೊತೆಯಲ್ಲೇ ವಾಸವಿದ್ದ. ಈ ವೇಳೆ ಆತ ಮೊಬೈಲ್‌ನಲ್ಲಿ ಫ್ರೀ ಫೈರ್ ಗೇಮ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ ಎನ್ನಲಾಗಿದೆ.

ಆಟವಾಡಲು ಹಣಕ್ಕಾಗಿ ಪದೇ ಪದೇ ಮಾವನಿಗೆ ಪೀಡಿಸುತ್ತಿದ್ದರಿಂದ ಜಿಗುಪ್ಸೆಗೊಂಡಿದ್ದ ನಾಗಪ್ರಸಾದ್, ಬಾಲಕನನ್ನು ಕೊಲೆ ಮಾಡಿದ್ದ. ಈ ಘಟನೆಯ ನಂತರ ನಾಗಪ್ರಸಾದ್ ಸ್ವತಃ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದನು. ಪೊಲೀಸರು ಎಫ್‌ಐಆರ್ ದಾಖಲಿಸಿ ಆತನನ್ನು ಜೈಲಿಗಟ್ಟಿದ್ದರು. ತದನಂತರ ಸಹೋದರಿ ಶಿಲ್ಪಾ ಅವರೇ ಅಣ್ಣನನ್ನು ಜಾಮೀನಿನ ಮೇಲೆ ಹೊರಗೆ ಕರೆತಂದಿದ್ದರು.

ಬಾಲಕನ ಸಾವಿನಿಂದ ಇಡೀ ಕುಟುಂಬ ಪಾಪ ಪ್ರಜ್ಞೆಯಲ್ಲಿ ಮುಳುಗಿತ್ತು. ಈ ದೋಷ ಪರಿಹಾರಕ್ಕಾಗಿ ಕುಟುಂಬ ಸದಸ್ಯರೆಲ್ಲರೂ ಕಳೆದ ಕೆಲವು ತಿಂಗಳುಗಳಿಂದ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಇದೇ ಉದ್ದೇಶಕ್ಕಾಗಿ ಬಿಹಾರಕ್ಕೆ ಪ್ರವಾಸ ತೆರಳಿದ್ದ ವೇಳೆ, ಅಲ್ಲಿನ ಹೋಟೆಲ್‌ನಲ್ಲಿ ನಾಲ್ವರೂ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮೃತದೇಹಗಳ ಬಳಿ ನಿದ್ರೆ ಮಾತ್ರೆಗಳು ಪತ್ತೆಯಾಗಿವೆ. ಮಾತ್ರೆಗಳ ಓವರ್ ಡೋಸ್‌ನಿಂದಲೇ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಮೃತರ ಬಳಿಯಿದ್ದ ಮೊಬೈಲ್ ಫೋನ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಹಾಗೂ 1.18 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದೆ.

Previous article`ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರಕ್ಕೆ ಸೂಚನೆ
Next articleT20 World Cup: ಭಾರತಕ್ಕೆ ಗೆಲುವಿನ ಸೂರ್ಯೋದಯ