ವಿಷಯವನ್ನು ಅನಗತ್ಯವಾಗಿ ವೈಭವೀಕರಿಸುವ ಅಗತ್ಯವಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ: ಐಜಿಪಿ ಹರ್ಷ ಸ್ಪಷ್ಟನೆ
ಬಳ್ಳಾರಿ: ನಗರದ ನಾಗಲಕೇರಿ ಪ್ರದೇಶದಲ್ಲಿರುವ ಐತಿಹಾಸಿಕ ವೀರ ಬಾಲಾಂಜನೇಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿರುವ ಘಟನೆ ಶುಕ್ರವಾರ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಸುಮಾರು 5:30ರ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿದ ಅರ್ಚಕರು ಪೂಜಾ ಸಿದ್ಧತೆ ನಡೆಸುವ ವೇಳೆ, ಪ್ಲಾಸ್ಟಿಕ್ ಕವರ್‌ನಲ್ಲಿ ಇರಿಸಲಾಗಿದ್ದ ಮಾಂಸದ ತುಂಡುಗಳನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ನೂರಾರು ಭಕ್ತರ ಜಮಾವಣೆ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಭಕ್ತರು ದೇವಸ್ಥಾನದ ಬಳಿ ಜಮಾಯಿಸಿದರು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಕೂಡ ಸ್ಥಳಕ್ಕೆ ಧಾವಿಸಿ ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದ ಆವರಣದಲ್ಲಿ ಮಾಂಸ ಪತ್ತೆಯಾಗಿರುವುದು ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಎಂದು ಅವರು ಆರೋಪಿಸಿದರು. ಪತ್ತೆಯಾದ ಮಾಂಸವು ಗೋಮಾಂಸದ ತುಂಡುಗಳೆಂದು ಶಂಕಿಸಲಾಗಿದ್ದು, ಈ ವಿಚಾರ ಭಾವನಾತ್ಮಕ ವಾತಾವರಣಕ್ಕೆ ಕಾರಣವಾಯಿತು.
ಉದ್ದೇಶಪೂರ್ವಕ ಕೃತ್ಯ ಎಂದು ಆರೋಪ: ಹಿಂದೂಪರ ಸಂಘಟನೆಗಳ ಮುಖಂಡರು ಮಾತನಾಡಿ, “ಇದು ಬೀದಿ ನಾಯಿಗಳು ತಂದು ಹಾಕಿದದ್ದಲ್ಲ. ನಾಯಿಗಳು ಇಷ್ಟು ನೀಟಾಗಿ ಪ್ಲಾಸ್ಟಿಕ್ ಕವರ್‌ನಲ್ಲಿ ಮಾಂಸವನ್ನು ತಂದು ಇಡುವುದಕ್ಕೆ ಸಾಧ್ಯವಿಲ್ಲ. ಇದು ಮನುಷ್ಯರು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ” ಎಂದು ಆರೋಪಿಸಿದರು. ಈ ಘಟನೆಯ ಹಿಂದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುಷ್ಕರ್ಮಿಗಳ ಕೈವಾಡವಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಸ್ಥಳೀಯರಲ್ಲಿ ಮಿಶ್ರ ಅಭಿಪ್ರಾಯ: ಇನ್ನು ಕೆಲ ಸ್ಥಳೀಯರು ಬೇರೆ ಅಭಿಪ್ರಾಯ ವ್ಯಕ್ತಪಡಿಸಿದ್ದು, “ನಾವು ಕಳೆದ 40–45 ವರ್ಷಗಳಿಂದ ಇಲ್ಲಿ ಪೂಜೆ ಮಾಡುತ್ತಿದ್ದೇವೆ. ಇದು ಪವಿತ್ರ ಹಾಗೂ ಐತಿಹಾಸಿಕ ದೇವಸ್ಥಾನ. ಇಂತಹ ಕೆಲಸ ಮನುಷ್ಯರು ಮಾಡಿರುವ ಸಾಧ್ಯತೆ ಕಡಿಮೆ. ನಾಯಿ ಅಥವಾ ಬೆಕ್ಕು ತಂದು ಹಾಕಿರಬಹುದು. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು” ಎಂದು ಹೇಳಿದರು.
ಪೊಲೀಸ್ ಪರಿಶೀಲನೆ ಮತ್ತು ತನಿಖೆ: ಘಟನೆಯ ಮಾಹಿತಿ ಪಡೆದ ತಕ್ಷಣ ಕೌಲಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳ್ಳಾರಿ ವಲಯ ಐಜಿ ಹರ್ಷ ಹಾಗೂ ಎಎಸ್‌ಪಿ ಕೆ.ಪಿ.ರವಿಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಪೊಲೀಸರು ಸ್ಥಳದಲ್ಲಿದ್ದ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಆರಂಭಿಸಿದ್ದಾರೆ.
ಐಜಿಪಿ ಹರ್ಷ ಸ್ಪಷ್ಟನೆ: ಮಾಧ್ಯಮಗಳಿಗೆ ಹೇಳಿಕೆ ನೀಡಿದ ಐಜಿಪಿ ಹರ್ಷ, “ದೇವಸ್ಥಾನದಲ್ಲಿ ಮಾಂಸ ಪತ್ತೆಯಾಗಿದೆ ಎಂಬ ವಿಷಯವನ್ನು ಅನಗತ್ಯವಾಗಿ ವೈಭವೀಕರಿಸುವ ಅಗತ್ಯವಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಇದು ಸಣ್ಣ ವಿಷಯವಾಗಿದ್ದು, ದೊಡ್ಡದಾಗಿ ಮಾಡಬೇಡಿ. ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತದೆ. ಪ್ರಕರಣವನ್ನು ಕ್ರಿಮಿನಲ್ ಕೇಸ್ ಆಗಿ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಅವರು ಮುಂದುವರಿದು, “ಬ್ಯಾನರ್ ವಿಚಾರ ಅಥವಾ ಬೇರೆ ಯಾವುದೇ ವಿಚಾರಗಳಿಗೆ ಇದನ್ನು ಜೋಡಿಸಬಾರದು. ಯಾರೇ ತಪ್ಪಿತಸ್ಥರಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೌಲಬಜಾರ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಭದ್ರತಾ ಕ್ರಮ ಬಲಪಡಿಕೆ: ಘಟನೆಯ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಶಾಂತಿ ಕಾಪಾಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಕಾಪಾಡಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಘಟನೆ ಸ್ಥಳೀಯ ಮಟ್ಟದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.























