Home Advertisement
Home ಕೃಷಿ/ವಾಣಿಜ್ಯ MSP ಕಡಲೆಗೆ ಕೊಟ್ಟ ಬೆಲೆ: `ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’

MSP ಕಡಲೆಗೆ ಕೊಟ್ಟ ಬೆಲೆ: `ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’

0
227

ಕೇಂದ್ರ ಸರ್ಕಾರ ನಿಗದಿಪಡಿಸಿದ ಎಂಎಸ್‌ಪಿ 5,800 ರೂ ಯಾತಕ್ಕೂ ಸಾಲದು, ಕಡಲೆ ಬೆಲೆ ಹೆಚ್ಚಳಕ್ಕೆ ರೈತರ ಮೊರೆ

ಶಿವಕುಮಾರ ಹಳ್ಯಾಳ


ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ 2.9 ಲಕ್ಷ ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆಯಾಗಿದೆ. ಬಹುಪಾಲು ಬೆಳೆಯನ್ನು ರೈತರು ಕಟಾವು ಮಾಡಿ ರಾಶಿಗೆ ಮುಂದಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಅಡಿಯಲ್ಲಿ ಈ ಬಾರಿ ಪ್ರತಿ ಕ್ವಿಂಟಲ್ ಕಡಲೆ ಕಾಳು ಖರೀದಿಗೆ 5,800 ರೂ ನಿಗದಿಪಡಿಸಿದೆ. ಈಗ ನಿಗದಿಪಡಿಸಿರುವ ಬೆಲೆ ಬೆಳೆ ಖರ್ಚು ವೆಚ್ಚ, ರೈತರ ಶ್ರಮದ ಲೆಕ್ಕಾಚಾರ ಹಾಕಿದರೆ ಏನೂ ಅಲ್ಲ. ಮತ್ತೊಂದೆಡೆ ರಾಜ್ಯ ಸರ್ಕಾರ ಕೂಡ ಪ್ರೋತ್ಸಾಹ ಧನ ನೀಡಿಲ್ಲ. ಬಿತ್ತನೆ, ಕೂಲಿಯಾಳು ವೆಚ್ಚ ಸೇರಿದರೆ ಹೆಚ್ಚಿನ ಲಾಭ ದಕ್ಕುವುದಿಲ್ಲ. ಬೆಂಬಲ ಬೆಲೆಯನ್ನು ಹೆಚ್ಚಿನಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಕಡಲೆ ಬೆಳೆ….? : ಧಾರವಾಡ, ಗದಗ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಡಲೆ ಬೆಳೆಯಲಾಗಿದೆ. ಆದರೆ ಸರ್ಕಾರ ಕಡಲೆ ಕೊಯ್ಲು ಆರಂಭವಾದರೂ ಖರೀದಿಗೆ ಮೀನಮೇಷ ಎಣಿಸುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಬೆಂಬಲ ಬೆಲೆಯನ್ನು ಕೇವಲ 90 ರೂ. ಏರಿಕೆ ಮಾಡಿ ರೈತರನ್ನು ಭಿಕ್ಷಕರಂತೆ ಕಾಣುತ್ತಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

ಇದನ್ನೂ ಓದಿ: ಬೆಳಗಾವಿ: ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಕನಿಷ್ಠ 15 ಸಾವಿರ ವೆಚ್ಚ : ಒಂದು ಎಕರೆ ಕಡಲೆ ಬೆಳೆಯಲು ಬೀಜ, ಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಸೇರಿ ಕನಿಷ್ಠವೆಂದರೂ 15 ಸಾವಿರ ರೂ. ವೆಚ್ಚ ತಗಲುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಇಳುವರಿ ನಾಲ್ಕು ಕ್ವಿಂಟಲ್ ಪ್ರಸ್ತುತ ದೊರೆತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು 7,350 ರೂ. ಏರಿಕೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಪ್ರಮುಖ ವಾಣಿಜ್ಯ ಬೆಳೆ ಕಡಲೆ: ಕಡಲೆಕಾಳು ಉತ್ತರ ಕರ್ನಾಟಕದ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಖರೀದಿ ಕೇಂದ್ರಗಳತ್ತ ರೈತರು ಮುಖ ಮಾಡುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ ಉತ್ತಮ ಇಳುವರಿ ಬಂದಿದೆ. ಕಡಲೆ ಒಕ್ಕಣೆ ಮಾಡಿರುವ ರೈತರು ಮಾರಾಟದಲ್ಲಿ ತೊಡಗಿದ್ದಾರೆ. ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಲಾದ ಖರೀದಿ ಕೇಂದ್ರಗಳು ನೋಂದಣಿ ಇಲ್ಲದೆ ಬಿಕೋ ಎನ್ನುತ್ತಿವೆ. ಅವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರ ಸಹಕರಿಸಿದರೆ ಅಭಿವೃದ್ಧಿ ಖಂಡಿತ ಸಾಧ್ಯ

ಉತ್ಪಾದನಾ ವೆಚ್ಚ ಹೆಚ್ಚಳ: ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಒಂದು ಪಾಕೆಟ್ ಕಡಲೆ ಬೀಜ ಖರೀದಿಗೆ 1400 ರೂ., ಬಿತ್ತನೆ ವೆಚ್ಚ ಒಂದು ಎಕರೆಗೆ ಎಂಟು ನೂರು, ಕೀಟ ಬಾಧೆಗೆ ಕನಿಷ್ಠ ಎರಡು ಬಾರಿ ರಾಸಾಯನಿಕ ಸಿಂಪಡನೆಗೆ 3,700 ರೂ., ಕಳೆ ಕೀಳಲು ಕೃಷಿ ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 300 ರೂ.ನಂತೆ ಎರಡು ಬಾರಿ ಕಳೆ ಕೀಳಲು, ಕೊಯ್ಲು ಬಂದಾಗ ಒಬ್ಬ ಕೃಷಿ ಕಾರ್ಮಿಕನಿಗೆ 300 ರೂ., ಕೊಯ್ಲು ಆದ ಬಳಿಕ ಮಾರುಕಟ್ಟೆಗೆ ತರಲು ಒಂದು ಚೀಲಕ್ಕೆ 30 ರೂ. ಹಾಗೂ ಕಡಲೆ ಕಾಳು ಬೇರ್ಪಡಿಸುವ ಯಂತ್ರದ ಖರ್ಚು ಒಂದು ಚೀಲಕ್ಕೆ 80 ರೂ ಎಲ್ಲವೂ ಸೇರಿ ಕನಿಷ್ಠ 15,000 ರೂ. ವೆಚ್ಚ ತಗಲುತ್ತದೆ ಎಂದು ಕಡಲೆ ಬೆಳೆಗಾರರು ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ.

ಈ ಬಾರಿ ಆರು ಎಕರೆ ಜಮೀನಿನಲ್ಲಿ ಕಡಲೆ ಬಿತ್ತನೆ ಮಾಡಿದ್ದೇವೆ. ಒಂದು ಎಕರೆಗೆ ಕನಿಷ್ಠ ಏನಿಲ್ಲ ಎಂದರೂ 12,000 ರೂ. ಖರ್ಚಾಗಿದೆ. ಆದರೆ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದ್ದು, 5,800 ರೂ. ನಿಗದಿ ಮಾಡಿದೆ. 7,000 ರೂ. ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ಖಾಸಗಿ ಅಂಗಡಿಗಳಲ್ಲಿ ಒಂದು ಕ್ವಿಂಟಲ್ ಕಡಲೆಯನ್ನು 5,500, 5,300 ರಂತೆ ಖರೀದಿ ಮಾಡುತ್ತಿದ್ದಾರೆ.

ಪೂರ್ಣಾನಂದ ಕೊಂಗವಾಡ, ರೈತ.


Previous articleರಾಜ್ಯ ಸರ್ಕಾರ ಸಹಕರಿಸಿದರೆ ಅಭಿವೃದ್ಧಿ ಖಂಡಿತ ಸಾಧ್ಯ
Next articleಕೇರಳದ ಪ್ರವಾಸಿ ವಿದ್ಯಾರ್ಥಿಗಳಿಂದ ಹುಚ್ಚಾಟ: ವಿಡಿಯೋ ವೈರಲ್