ಹೊಸದಿಲ್ಲಿ: ಪ್ರಥಮ ಬಾರಿಗೆ ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಪ್ರಾಮುಖ್ಯತೆ ದೊರೆತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ದೂರದೃಷ್ಟಿಯ ಉಪಕ್ರಮಗಳನ್ನು ಘೋಷಿಸಿದ್ದಾರೆ.
ಮುಖ್ಯವಾಗಿ ಆಯುರ್ವೇದಕ್ಕೆ ವಿಶೇಷ ಆದ್ಯತೆ ನೀಡಿದ್ದಾರೆ. ದೆಹಲಿಯ ಏಮ್ಸ್(ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮಾದರಿಯಲ್ಲೇ ಮೂರು ಆಯುರ್ವೇದ ಏಮ್ಸ್ ಸ್ಥಾಪನೆಗೆ ಒತ್ತು ನೀಡಿದ್ದಾರೆ. ಐದು ಪ್ರಾದೇಶಿಕ ವೈದ್ಯಕೀಯ ಹಬ್‌ಗಳ ಸ್ಥಾಪನೆಯ ಪ್ರಸ್ತಾವನೆ ಮಂಡಿಸಿದ್ದಾರೆ.
ಪ್ರಸ್ತುತ ಜಗತ್ತಿನಾದ್ಯಂತ ಭಾರತದ ಆಯುರ್ವೇದ ವೈದ್ಯಕೀಯ ಪದ್ಧತಿಗೆ ಅಪಾರವಾದ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಯುರ್ವೇದಿಕ ಚಿಕಿತ್ಸೆ ಹಾಗೂ ಔಷಧ ತಯಾರಿಕೆಗೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕಿದೆ. ಇದಕ್ಕಾಗಿ ಮೂರು ಆಯುರ್ವೇದ ಏಮ್ಸ್‌ಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಔಷಧಗಳ ಗುಣಮಟ್ಟ ಖಾತ್ರಿಗಾಗಿ ಆಯುಷ್ ಫಾರ್ಮಸಿ ಹಾಗೂ ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ.
ಇದನ್ನೂ ಓದಿ: ಕೇಂದ್ರ ಬಜೆಟ್: ರೈತರಿಗೆ ಬಂಪರ್ ಕೊಡುಗೆ
ಐದು ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯಗಳಿಗೆ ನೆರವಾಗುವ ಯೋಜನೆ ರೂಪಿಸಲಾಗಿದೆ. ಚಿಕಿತ್ಸೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಸೌಲಭ್ಯ ಕಲ್ಪಿಸುವ ಹಾಗೂ ವೈದ್ಯಕೀಯ ಸೇವೆ ನೀಡುವ ತಾಣಗಳನ್ನಾಗಿ ಇವುಗಳನ್ನು ಅಭಿವೃದ್ಧಿಪಡಿಸುವ ಅವಕಾಶವಿದೆ.
10,000 ಕೋಟಿ ರೂ. ಅನುದಾನದಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಬಯೋಫಾರ್ಮಾ ಶಕ್ತಿ ಯೋಜನೆಯನ್ನು ಘೋಷಿಸಲಾಗಿದೆ. ಇದರಡಿಯಲ್ಲಿ ಬಯೋಲಾಜಿಕ್ಸ್ ಹಾಗೂ ಬಯೋಸಿಮಿಲರ್ಸ್ ಔಷಧಿ ಉತ್ಪನ್ನಗಳನ್ನು ದೇಶೀಯ ಮಟ್ಟದಲ್ಲಿ ಉತ್ಪಾದಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತದೆ. ನಿಪರ್ಸ್ ಎಂಬ ಹೆಸರಿನಡಿ ಮೂರು ಹೊಸ ರಾಷ್ಟ್ರೀಯ ಫಾರ್ಮಾಸ್ಯೂಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಇರುವ ಏಳು ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ.
1,000 ಭಾರತ ಕ್ಲಿನಿಕಲ್ ಟ್ರಯಲ್ಸ್ ಸೈಟ್ಸ್‌ಗಳ ನೆಟ್‌ವರ್ಕ್ ರಚಿಸಲಾಗುತ್ತದೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣವನ್ನು ಬಲಪಡಿಸುವ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ತಜ್ಞರ ಅಭಿಪ್ರಾಯ ಪಡೆದು ಔಷಧಗಳ ಗುಣಮಟ್ಟ ನಿಯಂತ್ರಣ ವಿಷಯದಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸಲು ಹಾಗೂ ಅನುಮೋದನೆಗೆ ಕಾಲಮಿತಿ ನಿಗದಿಪಡಿಸುವ ಪ್ರಸ್ತಾವನೆ ಇದೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬಯೋಫಾರ್ಮಾ ವಲಯದಲ್ಲಿ 10,000 ಕೋಟಿ ರೂ. ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ. ದೇಶೀಯ ಔಷಧ ಉದ್ಯಮವನ್ನು ಬಲಪಡಿಸುವ ಉದ್ದೇಶ ಇದರ ಹಿಂದಿದೆ. ಸಾಮಾನ್ಯವಾಗಿ ಜೈವಿಕ ಔಷಧಗಳ ಉತ್ಪಾದನೆ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಸಜೀವ ಅಂಗಾಂಶಗಳು, ಜೀವಕೋಶಗಳನ್ನು ಕಚ್ಚಾವಸ್ತುಗಳನ್ನಾಗಿ ಬಳಸಲಾಗುತ್ತದೆ. ಔಷಧ ಕ್ಷೇತ್ರದ ತಯಾರಿಕೆ, ತಂತ್ರಗಾರಿಕೆ ಮತ್ತು ಮುಂಚೂಣಿ ವಲಯಗಳು, ಆರೋಗ್ಯ ಸೇವೆ ಮತ್ತು ಸುಧಾರಿತ ತಂತ್ರಜ್ಞಾನ ಸೇರಿದಂತೆ ಆರು ಕ್ಷೇತ್ರಗಳ ಮೇಲೆ ಮೇಲ್ವಿಚಾರಣೆ ಮಾಡಲು ಪ್ರಸ್ತಾಪಿಸಲಾಗಿದೆ.




















