ಬೆಂಗಳೂರು: ನಟ ದುನಿಯಾ ವಿಜಯ್ ಅಭಿನಯದ “ಲ್ಯಾಂಡ್ ಲಾರ್ಡ್” ಸಿನಿಮಾದ ಚಿತ್ರತಂಡವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಚಿತ್ರವನ್ನು ವೀಕ್ಷಿಸುವಂತೆ ಪ್ರೀತಿಯಿಂದ ಆಹ್ವಾನಿಸಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾದ ಆಶಯವನ್ನು ಶ್ಲಾಘಿಸಿ, ಸಮಾಜದಲ್ಲಿನ ಜಾತಿ ಅಸಮಾನತೆ, ಸಾಮಾಜಿಕ ಅನ್ಯಾಯ, ಮತ್ತು ಸಾಂವಿಧಾನಿಕ ಮೌಲ್ಯಗಳು ಎಂಬ ಗಂಭೀರ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ಪ್ರಯತ್ನವನ್ನು ಚಿತ್ರತಂಡ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಇಂತಹ ಸಾಮಾಜಿಕ ಕಳಕಳಿಯ ಕಥಾಹಂದರದ ಸಿನಿಮಾಗಳು ಅಪರೂಪವಾಗಿರುವ ಸಂದರ್ಭದಲ್ಲಿ, “ಲ್ಯಾಂಡ್ ಲಾರ್ಡ್” ಒಂದು ದಿಟ್ಟ ಹಾಗೂ ಅಗತ್ಯ ಪ್ರಯತ್ನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಉಳುವವರ ವಿರುದ್ಧ ಉಳ್ಳವರ ಗದಾಪ್ರಹಾರ
ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತಿರುವ ಸಿನಿಮಾಗಳು ಸಮಾಜದಲ್ಲಿ ಚರ್ಚೆಗೆ ದಾರಿ ಮಾಡಿಕೊಡುತ್ತವೆ. ಆ ನಿಟ್ಟಿನಲ್ಲಿ “ಲ್ಯಾಂಡ್ ಲಾರ್ಡ್” ಚಿತ್ರವು ಜನರನ್ನು ಯೋಚನೆಗೆ ಹಚ್ಚುವ ಶಕ್ತಿಯನ್ನೂ ಹೊಂದಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ಈ ಮಹತ್ವದ ಪ್ರಯತ್ನಕ್ಕಾಗಿ ಇಡೀ ಚಿತ್ರತಂಡಕ್ಕೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಮುಖ್ಯ ನಾಯಕ ನಟ ದುನಿಯಾ ವಿಜಯ್ ಅಭಿನಯದ ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಶತದಿನೋತ್ಸವವನ್ನು ಪೂರೈಸಲಿ ಎಂದು ಹಾರೈಸಿದರು. ಅಲ್ಲದೆ, ಇಂತಹ ಅರ್ಥಪೂರ್ಣ ಮತ್ತು ಸಾಮಾಜಿಕ ಜಾಗೃತಿಯ ಚಿತ್ರಗಳು ಇನ್ನಷ್ಟು ಮೂಡಿಬರಲು “ಲ್ಯಾಂಡ್ ಲಾರ್ಡ್” ಸಿನಿಮಾ ಸ್ಪೂರ್ತಿಯಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ಇದನ್ನೂ ಓದಿ: Movie Review: ಹೊಸ ಯುಗದ ಪ್ರೇಮ್ ಕಹಾನಿ
“ಇದು ಎಲ್ಲರೂ ನೋಡಲೇಬೇಕಾದ ಚಿತ್ರ. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುತ್ತೇನೆ. ನೀವೂ ನೋಡಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.









