Home ಸಿನಿ ಮಿಲ್ಸ್ ಮೊದಲ ದಿನವೇ ಮರಳು ಹಿಡಿಸಿದ ‘ಕರಾವಳಿ’ ಮುದ್ದು ಗುಮ್ಮ…

ಮೊದಲ ದಿನವೇ ಮರಳು ಹಿಡಿಸಿದ ‘ಕರಾವಳಿ’ ಮುದ್ದು ಗುಮ್ಮ…

0
43

‘ಕರಾವಳಿ’ಯಿಂದ ಬಂತು ಫಸ್ಟ್ ರೊಮ್ಯಾಂಟಿಕ್ ಮುದ್ದು ಗುಮ್ಮ…: ಕರಾವಳಿ ಮುದ್ದು ಗುಮ್ಮಗೆ ಸಿದ್ ಶ್ರೀರಾಮ್ ಧ್ವನಿ

“ಮುದ್ದು ಗುಮ್ಮ… ಮುದ್ದು ಗುಮ್ಮ ನೀನೇನಾ…” — ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಸಾಲೇ ಎಲ್ಲೆಡೆ ಗುನುಗುತ್ತಿದೆ. ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಕನ್ನಡ ಸಿನಿಮಾ ‘ಕರಾವಳಿ’ಯಿಂದ ಬಿಡುಗಡೆಯಾದ ಮುದ್ದು ಗುಮ್ಮ ಹಾಡು ರಿಲೀಸ್ ಆದ ಕೆಲವೇ ಹೊತ್ತಿನಲ್ಲಿ ಗಾನಪ್ರಿಯರ ಹೃದಯ ಗೆದ್ದಿದೆ.

ಭಾವಪೂರ್ಣ ಧ್ವನಿಗೆ ಹೆಸರಾಗಿರುವ ಸಿದ್ ಶ್ರೀರಾಮ್ ಅವರ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಮೆಲೋಡಿ ರೊಮ್ಯಾಂಟಿಕ್ ಹಾಡು, ಈಗಾಗಲೇ ಸಂಗೀತ ಪ್ರೇಮಿಗಳ ಪ್ಲೇಲಿಸ್ಟ್‌ಗೆ ಸೇರ್ಪಡೆಗೊಂಡಿದೆ. ಸ್ಯಾಂಡಲ್‌ವುಡ್‌ನ ಹಿಟ್ ಮೆಲೋಡಿ ಹಾಡುಗಳ ಪಟ್ಟಿಗೆ ಮುದ್ದು ಗುಮ್ಮ ಕೂಡ ಸೇರುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:  ಹಂಸಲೇಖ-ಎಸ್.ಮಹೇಂದರ್ ಜೋಡಿಯ ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್

ನಿರೀಕ್ಷೆ ಮೂಡಿಸಿರುವ ‘ಕರಾವಳಿ’: ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾ, ಟೀಸರ್ ಮತ್ತು ಪೋಸ್ಟರ್‌ಗಳ ಮೂಲಕವೇ ಭಾರಿ ಕುತೂಹಲ ಹುಟ್ಟುಹಾಕಿತ್ತು. ಇದೀಗ ಮೊದಲ ಹಾಡಿನ ಬಿಡುಗಡೆಯೊಂದಿಗೆ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸದ್ಯ ರಿಲೀಸ್ ಆದ ಈ ರೊಮ್ಯಾಂಟಿಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ನಾಯಕಿ ಸಂಪದಾ ಅವರ ಜೋಡಿ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಸಂಗೀತ ತಂಡದ ಮ್ಯಾಜಿಕ್: ಮುದ್ದು ಗುಮ್ಮ ಹಾಡಿಗೆ ಸಚಿನ್ ಬಸ್ರೂರು ಸಂಗೀತ ನೀಡಿದ್ದು, ಸಾಹಿತ್ಯವನ್ನು ಪ್ರಮೋದ್ ಮರವಂತೆ ರಚಿಸಿದ್ದಾರೆ. ಮೃದು ಸಂಗೀತ, ಅರ್ಥಪೂರ್ಣ ಸಾಹಿತ್ಯ ಮತ್ತು ಸಿದ್ ಶ್ರೀರಾಮ್ ಅವರ ಭಾವನಾತ್ಮಕ ಧ್ವನಿ—ಎಲ್ಲವೂ ಸೇರಿ ಹಾಡಿಗೆ ವಿಭಿನ್ನ ಆಕರ್ಷಣೆ ತಂದಿದೆ. ಪುಟ್ಟ ಟೀಸರ್‌ನಲ್ಲೇ ಗಮನ ಸೆಳೆದಿದ್ದ ಕರಾವಳಿ, ಈ ಹಾಡಿನ ಮೂಲಕ ಸಿನಿಪ್ರೇಮಿಗಳ ಕಾತರವನ್ನು ಇನ್ನಷ್ಟು ಹೆಚ್ಚಿಸಿದೆ.

ಇದನ್ನೂ ಓದಿ:  ಗಾಯಕಿ ಎಸ್. ಜಾನಕಿ ಪುತ್ರ ಮುರಳಿ ಕೃಷ್ಣ ನಿಧನ

ಕರಾವಳಿಯ ಸಂಸ್ಕೃತಿ, ನೆಲದ ಕಥೆ: ಕರಾವಳಿ ಹೆಸರೇ ಸೂಚಿಸುವಂತೆ, ಕರಾವಳಿ ಭಾಗದ ಸಂಸ್ಕೃತಿ, ಬದುಕಿನ ಸೊಗಡು ಮತ್ತು ಹಳ್ಳಿ ಹಿನ್ನೆಲೆ ಈ ಸಿನಿಮಾದ ಪ್ರಮುಖ ಆಕರ್ಷಣೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದು, ಮಾವೀರ ಎಂಬ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೊತೆಗೆ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮನುಷ್ಯ–ಪ್ರಾಣಿ ಸಂಘರ್ಷದ ಕಥೆ: ಈ ಸಿನಿಮಾ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷವನ್ನು ಕಥಾವಸ್ತುವಾಗಿ ಹೊಂದಿದ್ದು, ಪಕ್ಕಾ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿ ಬರುತ್ತಿದೆ. ವಿಕೆ ಫಿಲ್ಮ್ಸ್ ಅಸೋಸಿಯೇಷನ್ ಅಡಿಯಲ್ಲಿ ಗಾಣಿಗ ಫಿಲ್ಮ್ಸ್ ಮೂಲಕ ಗುರುದತ್ ಗಾಣಿಗ ನಿರ್ಮಾಣ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ.

ಇದನ್ನೂ ಓದಿ:  ವಿಜಯ್ ʼwhistleʼ ಗೆ ಆಯೋಗ ಅಸ್ತು

ಸದ್ಯ ಕರಾವಳಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಈಗಾಗಲೇ ಹಾಡಿನ ಮೂಲಕ ಸದ್ದು ಮಾಡಿರುವ ಕರಾವಳಿ, ಬಿಡುಗಡೆಯ ದಿನಾಂಕ ಘೋಷಣೆಗೆ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.