Home Advertisement
Home ನಮ್ಮ ಜಿಲ್ಲೆ ಬೆಂಗಳೂರು ವಿಲೀನದ ಚರ್ಚೆ ಬಿಟ್ಟು ಆಡಳಿತಾನುಭವದ ಬಗ್ಗೆ ಜನರನ್ನೇ ಕೇಳಿ: DKಗೆ HDK ತಿರುಗೇಟು

ವಿಲೀನದ ಚರ್ಚೆ ಬಿಟ್ಟು ಆಡಳಿತಾನುಭವದ ಬಗ್ಗೆ ಜನರನ್ನೇ ಕೇಳಿ: DKಗೆ HDK ತಿರುಗೇಟು

0
72

“ಕೊಳ್ಳೆ–ಸುಲಿಗೆ ನನ್ನ ಅನುಭವವಲ್ಲ” – ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ವಾಗ್ದಾಳಿ

ಬೆಂಗಳೂರು: ರಾಜಕೀಯ ವಲಯದಲ್ಲಿ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದ್ದು, ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಹಾಗೂ ಕಟುವಾದ ಪೋಸ್ಟ್‌ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ನಮ್ಮ ವಿಲೀನದ ಚಿಂತೆ ಪಕ್ಕಕ್ಕೆ ಇಡಿ. ನನ್ನ ಮತ್ತು ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ. ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ, ಅಲ್ಪಾವಧಿಗೆ ಪ್ರತಿಪಕ್ಷ ನಾಯಕ, ಈಗ ಕೇಂದ್ರ ಮಂತ್ರಿ. ನೀವೂ ಸುದೀರ್ಘ ಅವಧಿಗೆ ಶಾಸಕ, ಅನೇಕ ಬಾರಿ ಮಂತ್ರಿ, ಈಗ ಮಂತ್ರಿ ಜೊತೆಗೆ ಉಪ ಮುಖ್ಯಮಂತ್ರಿ. ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ನೀವು ಹೇಳುವುದಲ್ಲ, ಜನರನ್ನೇ ಕೇಳಬೇಕು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ‘ಗಿಲ್ಲಿ’  (ಗಿಲ್ಲಿ ದಾಖಲೆಯ ಫಾಲೋವರ್ಸ್‌ವಿಡಿಯೋ ನೋಡಿ)

“ಕೊಳ್ಳೆ, ಸುಲಿಗೆ ನನ್ನ ಅನುಭವವಲ್ಲ”: ತಮ್ಮ ಪೋಸ್ಟ್‌ನಲ್ಲಿ ತೀವ್ರ ಪದಗಳನ್ನು ಬಳಸಿರುವ ಕುಮಾರಸ್ವಾಮಿ, “ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್, ಫಿಕ್ಸಿಂಗ್, ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್‌ಪೀರಿಯನ್ಸ್ ಅಲ್ಲ ಡಿಕೆಶಿರವರೇ” ಎಂದು ನೇರವಾಗಿ ಆರೋಪಿಸಿದ್ದಾರೆ. ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ಸಿಕ್ಕ ಅವಕಾಶದಲ್ಲಿ ಜನರಿಗೆ ಕೈಲಾದಷ್ಟು ಸಹಾಯ ಮಾಡುವ “ಹುಲು ರಾಜಕಾರಣಿ” ನಾನು ಮಾತ್ರ ಎಂದು ಹೇಳಿದ ಅವರು, “ನಿಮಗೆ ಸಿದ್ಧಿಸಿರುವಂತ ಭಾರೀ ಅನುಭವ ನನಗಿಲ್ಲ. ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.

“ಭೂ ಕಬ್ಜ ಮತ್ತು ಖಾತೆ ಒತ್ತುವರಿಯಲ್ಲಿ ನಿಸ್ಸೀಮರು”: ಡಿ.ಕೆ. ಶಿವಕುಮಾರ್ ವಿರುದ್ಧ ಮತ್ತಷ್ಟು ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, “ಭೂ ಕಬ್ಜ, ಒತ್ತುವರಿ ನಿಮಗೆ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಧೂಳೆಬ್ಬಿಸಿದ ಟಾಕ್ಸಿಕ್‍: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?

ಡಿಸಿಎಂ ಅಧಿಕಾರ ಮಿತಿ ಪ್ರಶ್ನೆ: ಉಪ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ವ್ಯಾಪ್ತಿಯ ಕುರಿತು ಪ್ರಶ್ನೆ ಎತ್ತಿದ ಕುಮಾರಸ್ವಾಮಿ, “ನೀವು ಡಿಸಿಎಂ ಆಗಿರಬಹುದು. ಆದರೆ ಮಂತ್ರಿ ಪದವಿಗೆ ಇರುವಷ್ಟೇ ಶಿಷ್ಟಾಚಾರ ಮತ್ತು ಅಧಿಕಾರ ವ್ಯಾಪ್ತಿ ಆ ಹುದ್ದೆಗಿದೆ ಎನ್ನುವುದು ಗೊತ್ತಿಲ್ಲವೇ? ಅದಕ್ಕೇನು ಎಕ್ಸ್‌ಟ್ರಾ ಕೊಂಬು, ಕೋಡು ಇರಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಬಳ್ಳಾರಿ ಪೊಲೀಸ್ ಸಭೆ ವಿಚಾರದಲ್ಲಿ ಗಂಭೀರ ಆಕ್ಷೇಪ: ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, “ಆ ಸಭೆಯನ್ನು ಗೃಹ ಸಚಿವರು ನಡೆಸಬೇಕಿತ್ತು. ಇಲ್ಲವೇ ಮುಖ್ಯಮಂತ್ರಿಗಳು ನಡೆಸಬಹುದು. ನೀವು ಸಭೆ ನಡೆಸಿರುವುದು ಶಿಷ್ಟಾಚಾರ ಮತ್ತು ಅಧಿಕಾರದ ಸ್ಪಷ್ಟ ಉಲ್ಲಂಘನೆ” ಎಂದು ಆರೋಪಿಸಿದರು.

“ಇದು ಆಡಳಿತಾನುಭವ ಮತ್ತು ಸೀನಿಯಾರಿಟಿ ಎಂದು ಬೆನ್ನು ತಟ್ಟಿಕೊಳ್ಳುವ ವಿಚಾರವೇ?” ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, “ಆ ಸಭೆ ನಡೆಸಲು ಗೃಹ ಸಚಿವರು ಅಥವಾ ಮುಖ್ಯಮಂತ್ರಿ ನಿಮಗೆ ಸೂಚನೆ ನೀಡಿದ್ದರಾ? ಇಲ್ಲವಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಹಬ್ಬ: ಮಹಿಳಾ ಪ್ರೀಮಿಯರ್ ಲೀಗ್ 4ನೇ ಸೀಸನ್‌ಗೆ ಕ್ಷಣಗಣನೆ

“ಹೆಬ್ಬೆಟ್ಟು ಅಥವಾ ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ?”: ಪೋಸ್ಟ್‌ನ ಕೊನೆಯಲ್ಲಿ ಅತ್ಯಂತ ಕಟುವಾಗಿ ಪ್ರಶ್ನಿಸಿರುವ ಕುಮಾರಸ್ವಾಮಿ, “ಅವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ? ಅಥವಾ ರಬ್ಬರ್ ಸ್ಟ್ಯಾಂಪ್ ಗೃಹ ಮಂತ್ರಿಗಳಾ?” ಎಂದು ವ್ಯಂಗ್ಯವಾಡಿದ್ದಾರೆ. “ಒಬ್ಬ ಹಿರಿಯ ಮಂತ್ರಿಯ ಖಾತೆಯನ್ನು ಹೀಗೆ ಅಕ್ರಮವಾಗಿ ಒತ್ತುವರಿ ಮಾಡಲು ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಮಾಡಿಸಿದ್ದೀರಾ?” ಎಂದು ಪ್ರಶ್ನಿಸಿರುವ ಅವರು, “ನಿಮ್ಮದು ಭಾರೀ ಅನುಭವ, ಸಿಕ್ಕಾಪಟ್ಟೆ ಸೀನಿಯಾರಿಟಿ. ಇಂಥ ಸಣ್ಣ ವಿಷಯ ನಿಮಗೇಕೆ ತಿಳಿಯಲಿಲ್ಲ ಮಿಸ್ಟರ್ ಡಿಕೆಶಿ?” ಎಂದು ತಮ್ಮ ಪೋಸ್ಟ್‌ ಮುಕ್ತಾಯಗೊಳಿಸಿದ್ದಾರೆ.

ಈ ಪೋಸ್ಟ್ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದ್ದು, ಆಡಳಿತ ಶಿಷ್ಟಾಚಾರ ಮತ್ತು ಅಧಿಕಾರ ವ್ಯಾಪ್ತಿಯ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Previous articleTumakuru Accident: ಬಾಲಕಿ ಸೇರಿ ನಾಲ್ವರು ಅಯ್ಯಪ್ಪ ಭಕ್ತರು ಸಾವು
Next articleಪ್ರವಾಸಿ ಭಾರತೀಯ ದಿನ: ಸಾಗರೋತ್ತರ ಭಾರತೀಯರ ಕೊಡುಗೆಗೆ ಗೌರವ