ಹೃದಯಾಘಾತ: 4ನೇ ತರಗತಿ ವಿದ್ಯಾರ್ಥಿ ಸಾವು

ಚಾಮರಾಜನಗರ: ಶಾಲೆಯಲ್ಲಿ ಪಾಠ ಕೇಳುವಾಗಲೇ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಈ ಮೂಲಕ ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜನರು ಆತಂಕಗೊಂಡಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕುರಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು. ದೊಡ್ಡಹುಂಡಿ ಗ್ರಾಮದ ಮನೋಜ್ ಕುಮಾರ್ (10) ಮೃತ ವಿದ್ಯಾರ್ಥಿ. ಮೂಲತಃ ದೊಡ್ಡಹುಂಡಿ ಗ್ರಾಮದ ನಾಗರಾಜು ಹಾಗೂ ನಾಗರತ್ನ ದಂಪತಿಯ ಪುತ್ರ ಮನೋಜ್ ಕುಮಾರ್ ದೊಡ್ಡಹುಂಡಿಯಲ್ಲಿ 1 ಮತ್ತು 2ನೇ ತರಗತಿ ವ್ಯಾಸಂಗ ಮಾಡಿದ್ದನು.

3ನೇ ತರಗತಿಗೆ ಪಟ್ಟಣದ ಕುರಬಗೇರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಾಗಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಮೃತ ವಿದ್ಯಾರ್ಥಿಯ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇಂದು ತರಗತಿಯಲ್ಲಿ ಮನೋಜ್ ಕುಮಾರ್ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಸಮಯದಲ್ಲಿ ಹೃದಯಾಘಾತದಿಂದ ಕುಸಿದು ಬಿದಿದ್ದಾನೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.

ವಿದ್ಯಾರ್ಥಿ ಕಳೆದ ಎರಡು ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.