SK Home Ad
Home ಸುದ್ದಿ ದೇಶ ಗೇಮಿಂಗ್ ಲೋಕದಲ್ಲಿ ಹೊಸ ಸಂಚಲನ: GTA ಮಾದರಿಯಲ್ಲಿ ಸಿದ್ಧವಾಗುತ್ತಿದೆ ‘ರಾಮಾಯಣ’ ಓಪನ್-ವರ್ಲ್ಡ್ ಗೇಮ್!

ಗೇಮಿಂಗ್ ಲೋಕದಲ್ಲಿ ಹೊಸ ಸಂಚಲನ: GTA ಮಾದರಿಯಲ್ಲಿ ಸಿದ್ಧವಾಗುತ್ತಿದೆ ‘ರಾಮಾಯಣ’ ಓಪನ್-ವರ್ಲ್ಡ್ ಗೇಮ್!

0
61
‘ರಾಮಾಯಣ’ ಈಗ ವಿಡಿಯೋ ಗೇಮ್ ಲೋಕಕ್ಕೂ; GTA ಮಾದರಿಯ ಗೇಮ್ ನಿರ್ಮಾಣ ಹಂತದಲ್ಲಿದೆ

ರಣಬೀರ್-ಯಶ್ ನಟನೆಯ ಸಿನಿಮಾ ಬೆನ್ನಲ್ಲೇ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಂದ ಬಂಪರ್ ಘೋಷಣೆ.

ಮುಂಬೈ : ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸಿರುವ ರಾಮಾಯಣ ಚಿತ್ರವನ್ನು ನಿರ್ಮಿಸಿರುವ ನಮಿತ್ ಮಲ್ಹೋತ್ರಾ, ಇದೀಗ ಮಹಾಕಾವ್ಯವನ್ನು ವಿಡಿಯೋ ಗೇಮ್ ಲೋಕಕ್ಕೂ ಪರಿಚಯಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ. ಗ್ರ್ಯಾಂಡ್ ಥೆಫ್ಟ್ ಆಟೋ (GTA) ಮಾದರಿಯ ಅನುಭವ ನೀಡುವ ರಾಮಾಯಣ ಆಧಾರಿತ ಗೇಮ್ ನಿರ್ಮಾಣ ಹಂತದಲ್ಲಿದ್ದು, ಆಟಗಾರರು ಮಹಾಕಾವ್ಯದ ಜಗತ್ತನ್ನು ಸಂವಾದಾತ್ಮಕವಾಗಿ ಅನ್ವೇಷಿಸುವ ಅವಕಾಶ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದೂರದರ್ಶನದೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ನಮಿತ್ ಮಲ್ಹೋತ್ರಾ, ರಾಮಾಯಣದ ಕಥೆಯನ್ನು ಮಕ್ಕಳು ಆಟದ ಮೂಲಕವೂ ಅನುಭವಿಸಬೇಕು ಎಂಬುದು ತಮ್ಮ ಉದ್ದೇಶ ಎಂದು ಹೇಳಿದ್ದಾರೆ. ಸಿನಿಮಾ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿರುವ ಮಹಾಕಾವ್ಯದ ಜಗತ್ತನ್ನು ಗೇಮ್‌ನಲ್ಲಿ ಇನ್ನಷ್ಟು ಆಳವಾಗಿ ಅನುಭವಿಸಲು ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.

ಜಟಾಯುವಿನೊಂದಿಗೆ ಹಾರಾಟ, ರಾವಣನ ವಿರುದ್ಧ ಹೋರಾಟ : ನಿರ್ಮಾಪಕರ ಪ್ರಕಾರ, ಗೇಮ್‌ನಲ್ಲಿ ಆಟಗಾರರು ಜಟಾಯುವಿನೊಂದಿಗೆ ಹಾರುವ ಹಾಗೂ ರಾವಣನ ವಿರುದ್ಧ ಹೋರಾಡುವಂತಹ ಸಾಹಸಮಯ ಅನುಭವಗಳನ್ನು ಪಡೆಯಬಹುದು. ಆಟದ ಮೂಲಕ ಮನರಂಜನೆಯ ಜೊತೆಗೆ ರಾಮಾಯಣದ ಕಥೆ, ಪಾತ್ರಗಳು ಮತ್ತು ಅದರಲ್ಲಿರುವ ಮೌಲ್ಯಗಳನ್ನು ಯುವಜನರಿಗೆ ಪರಿಚಯಿಸುವ ಆಶಯವೂ ಇದೆ.

ಆದರೆ ಗೇಮ್‌ನ ಸಂಪೂರ್ಣ ಕಥಾವಸ್ತು, ಆಟದ ವಿನ್ಯಾಸ, ಅಭಿವೃದ್ಧಿ ಸಂಸ್ಥೆ, ಯಾವ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಬಿಡುಗಡೆ ದಿನಾಂಕದ ಕುರಿತು ಇನ್ನೂ ಅಧಿಕೃತ ವಿವರಗಳನ್ನು ನಿಡಿಲ್ಲ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವುದಾಗಿ ಮಲ್ಹೋತ್ರಾ ಹೇಳಿದ್ದಾರೆ.

ಸಿನಿಮಾ ಮೀರಿದ ‘ರಾಮಾಯಣ’ ಮನರಂಜನಾ ವಿಶ್ವ : ರಾಮಾಯಣವನ್ನು ಎರಡು ಭಾಗಗಳ ಸಿನಿಮಾ ಸರಣಿಗೆ ಮಾತ್ರ ಸೀಮಿತಗೊಳಿಸದೆ, ವಿಶಾಲವಾದ ಜಾಗತಿಕ ಮನರಂಜನಾ ಬ್ರ್ಯಾಂಡ್ ಆಗಿ ರೂಪಿಸುವುದು ನಿರ್ಮಾಪಕರ ಯೋಜನೆಯಾಗಿದೆ. ಇದರ ಭಾಗವಾಗಿ ವಿಡಿಯೋ ಗೇಮ್‌ಗಳು, ಅನಿಮೇಷನ್, ಥೀಮ್ ಪಾರ್ಕ್‌ಗಳು, ಮ್ಯೂಸಿಯಂಗಳು ಮತ್ತು ಇತರ ಅನುಭವಾಧಾರಿತ ಮನರಂಜನಾ ಯೋಜನೆಗಳ ಕುರಿತು ಅವರು ಹಿಂದೆ ಕೂಡ ಮಾತನಾಡಿದ್ದರು.

ಭಾರತೀಯ ಮಹಾಕಾವ್ಯಗಳಲ್ಲಿರುವ ಕಥೆಗಳು, ಪಾತ್ರಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವಾಗಿ ಈ ಯೋಜನೆ ಗಮನ ಸೆಳೆಯುತ್ತಿದೆ.

ಡಿಜಿಟಲ್ ರೂಪಾಂತರದೊಂದಿಗೆ ಜವಾಬ್ದಾರಿಯುತ ಕಥನದ ಅಗತ್ಯ : ರಾಮಾಯಣದಂತಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ಮಹಾಕಾವ್ಯವನ್ನು ಗೇಮ್ ರೂಪದಲ್ಲಿ ಪರಿಚಯಿಸುವಾಗ, ಕಥೆಯ ಮೂಲ ಆಶಯ, ಪಾತ್ರಗಳ ಗೌರವ ಮತ್ತು ಸಂವೇದನಾಶೀಲ ಅಂಶಗಳನ್ನು ಸಮತೋಲನದಿಂದ ನಿರ್ವಹಿಸುವುದು ಮುಖ್ಯವಾಗಲಿದೆ.

ಗೇಮಿಂಗ್ ಮೂಲಕ ಹೊಸ ತಲೆಮಾರಿಗೆ ಮಹಾಕಾವ್ಯ ಪರಿಚಯಿಸುವ ಪ್ರಯತ್ನಕ್ಕೆ ಉತ್ಸಾಹ ವ್ಯಕ್ತವಾಗುತ್ತಿದ್ದರೂ, ಕಥೆಯ ರೂಪಾಂತರದ ಬಗ್ಗೆ ಪ್ರೇಕ್ಷಕರಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆಯೂ ಇದೆ.