BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟವು ಫಿನಾಲೆಯ ಸನಿಹ ಬರುತ್ತಿದ್ದು, 80ಕ್ಕೂ ಹೆಚ್ಚು ದಿನಗಳನ್ನು ಪೂರೈಸಿರುವ ಈ ನಿರ್ಣಾಯಕ ಹಂತದಲ್ಲಿ ಸ್ಪರ್ಧಿ ಯಶಸ್ ಕೃಷ್ಣ ತಮ್ಮ ಚಾಣಾಕ್ಷ ಆಟದ ಮೂಲಕ ಗಮನ ಸೆಳೆದಿದ್ದಾರೆ. ಆರಂಭದ ದಿನಗಳಲ್ಲಿ ಮನೆಯೊಳಗೆ ತುಂಬಾ ಡಲ್ ಆಗಿದ್ದು, ಬೇಗನೆ ಹೊರಹೋಗಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ, ಮಂಜು ಜೊತೆಗಿನ ಜಗಳದ ವೇಳೆ ನಿಂದನೆ ಎದುರಾದರೂ ಕೆಟ್ಟ ಪದ ಬಳಸದೆ ಸಂಯಮ ಕಾಯ್ದುಕೊಂಡಿದ್ದು ಯಶಸ್ ಅವರ ಆಟಕ್ಕೆ ದೊಡ್ಡ ತಿರುವು ನೀಡಿತು. ಅಲ್ಲಿಂದ ಏರುಗತಿಯಲ್ಲಿ ಸಾಗಿದ ಅವರು ಕಳೆದ ಎರಡು ವಾರಗಳಿಂದ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಟವಾಡುತ್ತಾ ಮುನ್ನಡೆದಿದ್ದಾರೆ.
ಈ ವಾರ ನಡೆದ ‘ಗುಳ್ಳೆನರಿ’, ‘ಕಾಗೆ’ ಮತ್ತು ‘ಸಿಂಹ’ ಒಳಗೊಂಡ ರೋಚಕ ಟಾಸ್ಕ್ನಲ್ಲಿ ಯಶಸ್ ಕೃಷ್ಣ ಎರಡು ಬಾರಿ ಮನೆಯವರ ದಿಕ್ಕು ತಪ್ಪಿಸಿ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಗುಳ್ಳೆನರಿಯಾಗಿ ಪ್ರಶಾಂತ್ ಹೆಸರಿನ ಮುಂದೆ ‘ಹಂಟರ್’ ಎಂದು ಬರೆದು ಕ್ಯಾಪ್ಟೆನ್ಸಿ ರೇಸ್ನಿಂದ ಹೊರಗುಳಿಯುವಂತೆ ಮಾಡಿದರೂ, ಆ ಕೆಲಸ ಮಾಡಿದವರು ಯಾರು ಎಂಬ ಸುಳಿವು ಯಾರಿಗೂ ಸಿಗಲಿಲ್ಲ. ಬಳಿಕ ಎದುರಾಳಿಗಳ ತಪ್ಪು ನಿರ್ಧಾರಗಳಿಂದ ‘ಸಿಂಹ’ದ ಕಿರೀಟವೂ ಯಶಸ್ ಪಾಲಾಯಿತು.
ಸೌಂದರ್ಯ ಗುಳ್ಳೆನರಿಯಾಗಿರಬಹುದು ಎಂದು ಭಾವಿಸಿ ಕಾಫಿ ಕಪ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ‘ಕಾಗೆ’ ತಾಂಡವ್ ಅವರನ್ನು, ಗಾನವಿ ನೀಡಿದ ಸುಳಿವು ಮತ್ತು ಗಗನ್ ನಾಟಕವನ್ನು ಭೇದಿಸಿ ಯಶಸ್ ಪತ್ತೆಹಚ್ಚಿದರು. ಆದರೆ, ತಾವೇ ಗುಳ್ಳೆನರಿ ಎಂಬ ಸತ್ಯ ಬಿಟ್ಟುಕೊಡದೆ ಶಾಸ್ತ್ರಿ ಅವರ ಹೆಸರು ಹೇಳಿ ಮತ್ತಷ್ಟು ಗೊಂದಲ ಮೂಡಿಸಿದ ಯಶಸ್ ಆಟವನ್ನು ಸ್ವತಃ ಬಿಗ್ ಬಾಸ್ ಶ್ಲಾಘಿಸಿದ್ದು, ವಾರಾಂತ್ಯದಲ್ಲಿ ಕಿಚ್ಚನ ಚಪ್ಪಾಳೆ ಸಿಗುವ ನಿರೀಕ್ಷೆಯೂ ಗರಿಗೆದರಿದೆ.






















