ಪಾಟ್ನಾ:ಮದುವೆ ಎಂದರೆ ಸಾಮಾನ್ಯವಾಗಿ ಅದ್ದೂರಿ ಅಲಂಕಾರ, ಭರ್ಜರಿ ಊಟ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಕಣ್ಣಿಗೆ ಬೀಳುತ್ತವೆ. ಆದರೆ ಬಿಹಾರದ ಶಾಸಕ ಅನಂತ್ ಸಿಂಗ್ ಪುತ್ರಿಯ ಮದುವೆಯಲ್ಲಿ ನಡೆದ ಕುದುರೆ ಓಟ ಮಾತ್ರ ಎಲ್ಲರ ಗಮನ ಸೆಳೆದಿದೆ. ಇಲ್ಲಿ ಕುದುರೆ ಓಟದಲ್ಲಿ ಗೆದ್ದವರಿಗೆ ಸಿಗುವ ಬಹುಮಾನ ಮಹೀಂದ್ರಾ ಥಾರ್ ಎಸ್ಯುವಿ ಈ ವಿಶೇಷ ಸ್ಪರ್ಧೆ ನೋಡಲು ಲಕ್ಷಾಂತರ ಜನರು ಹರಿದುಬಂದಿದ್ದು, ಜನಸಂದಣಿಯ ಕಾರಣಕ್ಕೆ ಅಂತಿಮ ಸುತ್ತನ್ನೇ ಮುಂದೂಡಲಾಗಿದೆ.
ಬಿಹಾರದ ಮೊಕಾಮಾ ಸಮೀಪದ ಲಡ್ಮಾ ಗ್ರಾಮದಲ್ಲಿ ಮದುವೆ ಸಂಭ್ರಮದ ಭಾಗವಾಗಿ ಈ ಕುದುರೆ ರೇಸ್ ಆಯೋಜಿಸಲಾಗಿತ್ತು. ಈಗಾಗಲೇ ಹಲವು ಸುತ್ತುಗಳ ಸ್ಪರ್ಧೆ ಹಾಗೂ ಸೆಮಿಫೈನಲ್ ಪಂದ್ಯಗಳು ನಡೆದಿದ್ದು, ಆರು ಕುದುರೆಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
3ರಿಂದ 4 ಲಕ್ಷ ಜನರ ಆಗಮನ, 5 ಕಿ.ಮೀ. ಟ್ರಾಫಿಕ್ ಜಾಮ್
ಗುರುವಾರ ನಡೆದ ಸ್ಪರ್ಧೆಯನ್ನು ವೀಕ್ಷಿಸಲು ನಿರೀಕ್ಷೆಗೂ ಮೀರಿದ ಜನಸಾಗರವೇ ಹರಿದುಬಂದಿತ್ತು. ಆಯೋಜಕರ ಪ್ರಕಾರ ಸುಮಾರು 3ರಿಂದ 4 ಲಕ್ಷ ಜನರು ಲಡ್ಮಾ ಗ್ರಾಮಕ್ಕೆ ಆಗಮಿಸಿದ್ದರು. ಇದರಿಂದ ವಾಹನ ಸಂಚಾರ ಹಾಗೂ ಜನಸಂದಣಿ ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಸುಮಾರು ಐದು ಕಿಲೋಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವರು ಸ್ಪರ್ಧೆಯನ್ನು ಹತ್ತಿರದಿಂದ ವೀಕ್ಷಿಸಲು ಎತ್ತರದ ಗೋಪುರಗಳನ್ನೂ ಏರಿದ್ದರು. ಇದರಿಂದ ಅಪಾಯದ ಸಾಧ್ಯತೆಯೂ ಎದುರಾಗಿತ್ತು. ಜನಸಂದಣಿಯನ್ನು ನಿಯಂತ್ರಿಸುವುದು ಮತ್ತು ಪ್ರೇಕ್ಷಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಜಕರು ಫೈನಲ್ ಪಂದ್ಯವನ್ನು ಮುಂದೂಡುವ ನಿರ್ಧಾರ ಕೈಗೊಂಡಿದ್ದಾರೆ.
ಫೈನಲ್ ಯಾವಾಗ ನಡೆಯಲಿದೆ?
ಈ ಕುರಿತು ಶುಕ್ರವಾರ ಮಾತನಾಡಿರುವ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಜೈ ಸಿಂಗ್, ಸದ್ಯ ಮದುವೆಯ ಕಾರ್ಯಕ್ರಮಗಳಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದಾರೆ. ಮದುವೆ ಸಂಬಂಧಿತ ಕಾರ್ಯಕ್ರಮಗಳು ಮುಗಿದ ಬಳಿಕ ಅಂತಿಮ ಸುತ್ತಿನ ದಿನಾಂಕ ಮತ್ತು ವ್ಯವಸ್ಥೆಗಳ ಕುರಿತು ನಿರ್ಧಾರ ಕೈಗೊಂಡು ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.




















