ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದು ನಮಗೆ ತಾತ್ಕಾಲಿಕ ಹಿನ್ನಡೆಯಷ್ಟೇ. ಈ ಬೆಳವಣಿಗೆಯಿಂದ ಧೃತಿಗೆಡುವುದಿಲ್ಲ ಅಥವಾ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂದು ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಗೌರವ ಮತ್ತು ನಂಬಿಕೆ ಇದೆ. ದೇವರ ಮೇಲಿನ ಅಚಲ ಭಕ್ತಿ ಹಾಗೂ ಸತ್ಯದ ಮೇಲಿನ ವಿಶ್ವಾಸದೊಂದಿಗೆ ಕಾನೂನು ಹೋರಾಟ ಮುಂದುವರಿಸಲಾಗುವುದು. ನ್ಯಾಯ ದೊರೆಯುವವರೆಗೂ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುವುದು ನಮ್ಮ ದೃಢ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ಕುಟುಂಬದೊಂದಿಗೆ ನಿಂತಿರುವ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿರುವ ಅವರು, ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ಮತ್ತು ಬೆಂಬಲವೇ ನಮಗೆ ದೊಡ್ಡ ಶಕ್ತಿ. ಯಾರೂ ಆತಂಕಪಡುವ ಅಗತ್ಯವಿಲ್ಲ. ತಾಳ್ಮೆ ಮತ್ತು ಧೈರ್ಯದಿಂದ ಪರಿಸ್ಥಿತಿ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸತ್ಯಕ್ಕೆ ಜಯ ಸಿಗಲಿದೆ ಹಾಗೂ ನ್ಯಾಯ ದೊರೆಯಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಹೀಗಾಗಿ ಬೆಂಬಲಿಗರು ಧೈರ್ಯ ಕಳೆದುಕೊಳ್ಳದೆ ನಮ್ಮೊಂದಿಗೆ ಇರಬೇಕು ಎಂದು ಅವರು ಮನವಿ ಮಾಡಿದ್ದಾರೆ.




















