ನವದೆಹಲಿ: 2002ರ ಗುಜರಾತ್ನ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇರ್ಫಾನ್ ಸಿರಾಜ್ ಪಡಾ ಎಂಬಾತನಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮಾನವೀಯ ಹಾಗೂ ವೈದ್ಯಕೀಯ ಕಾರಣಗಳನ್ನು ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸೋಮವಾರ ಈ ಆದೇಶ ಹೊರಡಿಸಿದೆ. ಪಡಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದನ್ನು ಗುಜರಾತ್ ಸರ್ಕಾರವೂ ಒಪ್ಪಿಕೊಂಡಿದ್ದು, ಜಾಮೀನು ನೀಡುವುದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.
ಅಲ್ಲದೆ, ಆರೋಪಿ ಈಗಾಗಲೇ 17 ವರ್ಷಗಳಿಗೂ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದಾನೆ. ಹೀಗಾಗಿ ವಿಚಾರಣಾ ನ್ಯಾಯಾಲಯ ವಿಧಿಸುವ ಸೂಕ್ತ ಷರತ್ತುಗಳಿಗೆ ಒಳಪಟ್ಟು ಆತನನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಆದರೆ, ಈ ಆದೇಶದಿಂದ ಪಡಾ ಪ್ರಕರಣದಿಂದ ಖುಲಾಸೆಗೊಂಡಿದ್ದಾನೆ ಎಂದರ್ಥವಲ್ಲ. ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಆತ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್ನಲ್ಲಿ ಇನ್ನೂ ವಿಚಾರಣೆಗೆ ಬಾಕಿ ಇದೆ. ಸದ್ಯಕ್ಕೆ ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಏನಿದು ಗೋಧ್ರಾ ರೈಲು ದಹನ ಪ್ರಕರಣ?: 2002ರ ಫೆಬ್ರವರಿ 27ರಂದು ಗುಜರಾತ್ನ ಗೋಧ್ರಾ ರೈಲು ನಿಲ್ದಾಣದ ಸಮೀಪ ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಕರಸೇವಕರು ಪ್ರಯಾಣಿಸುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ನ ಎಸ್-6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಈ ಭೀಕರ ಘಟನೆಯಲ್ಲಿ 59 ಮಂದಿ ಸಜೀವ ದಹನಗೊಂಡಿದ್ದರು. ಘಟನೆಯ ಬೆನ್ನಲ್ಲೇ ಗುಜರಾತ್ನಾದ್ಯಂತ ವ್ಯಾಪಕ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ದೇಶದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲೊಂದಾದ ಈ ಪ್ರಕರಣದಲ್ಲಿ ಹಲವರಿಗೆ ಶಿಕ್ಷೆ ವಿಧಿಸಲಾಗಿತ್ತು.





















