SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ಜಗದೀಶ್‌ಗೆ ‘ಮುಸುರೆ ತಿಕ್ಕುವವನು’ ಎಂದ ಮಂಜ ಹಾಗೂ ಗಾನವಿಗೆ ಕಿಚ್ಚ ಸುದೀಪ್...

ಬಿಗ್ ಬಾಸ್ 13: ಜಗದೀಶ್‌ಗೆ ‘ಮುಸುರೆ ತಿಕ್ಕುವವನು’ ಎಂದ ಮಂಜ ಹಾಗೂ ಗಾನವಿಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್!

0
21

BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ಮನೆಯಲ್ಲಿ ಕಳೆದ ವಾರ ನಡೆದ ಜಗಳ ಮತ್ತು ಅಸಭ್ಯ ಪದಗಳ ಬಳಕೆಗೆ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಂಜ, ಗಾನವಿ ಗೌಡ ಮತ್ತು ಜಗದೀಶ್ ಮಾತಿನ ವೈಖರಿಯನ್ನು ಖಂಡಿಸಿದ ಸುದೀಪ್, ಮೂವರಿಗೂ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜಗದೀಶ್ ಅವರನ್ನು ಉದ್ದೇಶಿಸಿ ‘ನೀನು ಗಂಡಸಲ್ಲ’ ಹಾಗೂ ‘ಮುಸುರೆ ತಿಕ್ಕಿ ಬಂದಿದ್ದೀಯ’ ಎಂದು ಮಂಜ ಕೀಳಾಗಿ ಮಾತನಾಡಿದ್ದರು. ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸುದೀಪ್, “ನಿಮ್ಮ ಪ್ರಕಾರ ಗಂಡಸ್ತನ ಎಂದರೆ ಏನು?” ಎಂದು ಮಂಜ ಮತ್ತು ಗಾನವಿಗೆ ನೇರವಾಗಿ ಪ್ರಶ್ನಿಸಿದರು. ಮುಸುರೆ ತಿಕ್ಕಿ ಇಷ್ಟು ದೊಡ್ಡ ಸ್ಥಾನಕ್ಕೆ ಬಂದಿರುವುದು ಜಗದೀಶ್ ಅವರ ಸಾಧನೆ. ನಿಮಗೆ ಇದೇ ಪ್ರಶ್ನೆ ಕೇಳಿದರೆ ಹೇಗಿರುತ್ತಿತ್ತು ಎಂದು ಮಂಜನಿಗೆ ಸುದೀಪ್ ತಿರುಗೇಟು ನೀಡಿದರು.

ಮತ್ತೊಂದೆಡೆ, ಗಾನವಿ ಅವರು ಜಗದೀಶ್‌ಗೆ “ಆಂಟಿ ತರ ಮಾತನಾಡಬೇಡ” ಎಂದು ಹೇಳಿದ್ದ ಆಡಿಯೋವನ್ನು ಸುದೀಪ್ ಪ್ಲೇ ಮಾಡಿದರು. ಆರಂಭದಲ್ಲಿ ತಾವು ಹಾಗೆ ಹೇಳೇ ಇಲ್ಲ ಎಂದು ವಾದಿಸಿದ ಗಾನವಿ ಮತ್ತು ಮಂಜ, ಆಡಿಯೋ ಕೇಳಿದ ಬಳಿಕ ತಬ್ಬಿಬ್ಬಾಗಿ ತಪ್ಪೊಪ್ಪಿಕೊಂಡರು. ಕೋಟಿಗಟ್ಟಲೆ ಜನ ನೋಡುವ ಶೋನಲ್ಲಿ ಪದಗಳ ಮೇಲೆ ಹಿಡಿತ ಇರಲಿ ಎಂದು ಸುದೀಪ್ ಎಚ್ಚರಿಕೆ ನೀಡಿದರು.

ಇದೇ ವೇಳೆ ಜಗದೀಶ್ ಬಳಸಿದ್ದ ‘ಮಾನಗೆಟ್ಟವಳು’ ಮತ್ತು ‘ಲಪಂಗ’ ಎಂಬ ಪದಗಳಿಗೂ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದರು. ಈ ಜಗಳದಲ್ಲಿ ಮೂವರದ್ದೂ ತಪ್ಪಿದೆ ಎಂದು ಸುದೀಪ್ ಸ್ಪಷ್ಟಪಡಿಸುತ್ತಿದ್ದಂತೆ, ಜಗದೀಶ್ ತಕ್ಷಣವೇ ಕ್ಷಮೆಯಾಚಿಸಿದರು. ಆದ್ರೆ ಮಂಜ ಮತ್ತು ಗಾನವಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಟ್ಟಾರೆಯಾಗಿ.. ಮತ್ತೊಂದು ಅವಕಾಶ ಸಿಕ್ಕರೂ ಹಳೆಯ ಚಾಳಿ ಮುಂದುವರಿಸಿದ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಸರಿಯಾದ ಬುದ್ಧಿ ಹೇಳಿದ್ದಾರೆ.