SK Home Ad
Home ಸುದ್ದಿ ರಾಜ್ಯ ಬಸವ ಮಂಟಪ ವಿವಾದಕ್ಕೆ ಹೊಸ ತಿರುವು: ಹಂಜ್ ಹತ್ಯೆಗೆ ₹5 ಲಕ್ಷ ಬಹುಮಾನ ಘೋಷಣೆ

ಬಸವ ಮಂಟಪ ವಿವಾದಕ್ಕೆ ಹೊಸ ತಿರುವು: ಹಂಜ್ ಹತ್ಯೆಗೆ ₹5 ಲಕ್ಷ ಬಹುಮಾನ ಘೋಷಣೆ

0
6

ಚಿಕ್ಕೋಡಿ: ಬಸವಣ್ಣನವರ ಕುರಿತು ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಬರಹ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಅವರ ಹತ್ಯೆ ಮಾಡುವವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ಲಿಂಗಾಯತ ಮುಖಂಡರೊಬ್ಬರು ಬಹಿರಂಗವಾಗಿ ಘೋಷಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಅಥಣಿಯ ಬಸವೇಶ್ವರ ವೃತ್ತದಲ್ಲಿ ರವಿ ಹಂಜ್ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪ್ರಕಾಶ ಮಹಾಜನ್ ಎಂಬುವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಕಾಶ ಮಹಾಜನ್, ಬಸವಣ್ಣನವರ ಕುರಿತು ವಿವಾದಾತ್ಮಕವಾಗಿ ಬರೆದಿರುವ ರವಿ ಹಂಜ್ ಅವರನ್ನು ಹತ್ಯೆ ಮಾಡಬೇಕು ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ. ಅಲ್ಲದೆ, ಬಸವ ಭಕ್ತರೆಲ್ಲರೂ ಒಂದಾಗಬೇಕು. ಯಾರಾದರೂ ರವಿ ಹಂಜ್ ಅವರನ್ನು ಕೊಲೆ ಮಾಡಲು ಮುಂದಾದರೆ ನನಗೆ ಕರೆ ಮಾಡಲಿ. ವೈಯಕ್ತಿಕವಾಗಿ ಐದು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.

ಈ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಬಸವಣ್ಣನವರ ಕುರಿತು ಪುಸ್ತಕದಲ್ಲಿ ಮಾಡಿರುವ ಬರಹಗಳನ್ನು ಖಂಡಿಸುವ ಪ್ರತಿಭಟನೆ ಹತ್ಯೆಗೆ ಬಹಿರಂಗವಾಗಿ ಬಹುಮಾನ ಘೋಷಿಸುವ ಹಂತಕ್ಕೆ ತಲುಪಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಬಸವ ಮಂಟಪ’ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದು, ಲೇಖಕ ರವಿ ಹಂಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಅಥಣಿಯಲ್ಲಿ ವ್ಯಕ್ತವಾಗಿರುವ ಹತ್ಯೆ ಬೆದರಿಕೆ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.